Advertisement
ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯ ನಿವಾಸಿ ಅಬ್ಟಾಸ್ ಅವರ ಮೊಬೈಲ್‌ಗೆ 92-3471745608 ಸಂಖ್ಯೆಯಿಂದ ಕರೆಯೊಂದು ಬಂದಿದ್ದು, ಹಿಂದಿ ಭಾಷೆಯಲ್ಲಿ ತಾನು ಸಿಬಿಐ ಆಫೀಸರ್ ಆಗಿದ್ದು, ದಿಲ್ಲಿ ಕಚೇರಿಯಿಂದ ಮಾತಾನಾಡುತ್ತಿದ್ದೇನೆ. ಅಬ್ಟಾಸ್ ಅವರ ಪ್ರಥಮ ವರ್ಷದ ಎಂಜಿನಿಯರಿಂಗ್ ಕಲಿಯುತ್ತಿರುವ ಮಗನ ಹೆಸರನ್ನು ಉಲ್ಲೇಖೀಸಿ ಮಾತನಾಡಿದ್ದಾನೆ. ಕರೆ ಬಂದ ನಂಬರ್‌ನ ಪ್ರೊಫೈಲ್ ಪೋಟೋ ಕೂಡಾ ಪೊಲೀಸ್ ಆಫೀಸರ್‌ನಂತಿರುವ ವ್ಯಕ್ತಿಯದ್ದಾಗಿತ್ತು. ನಂಬರಿನ ಕೆಳಗಡೆ ಸಿಬಿಐ ಎಂದೂ ದಾಖಲಿಸಲ್ಪಟ್ಟಿರುವುದು ಕಂಡುಬಂದಿದೆ.
ಈ ಹಿಂದೆ ಅಬ್ಟಾಸ್ ಅವರ ಸಂಬಂಧಿಕರೊಬ್ಬರ ಮಗಳು ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಕಲಿಯುತ್ತಿದ್ದು, ಆಕೆಯನ್ನು ಅಪಹರಿಸಲಾಗಿದೆ ಎಂಬ ಕರೆಯನ್ನು ಆಕೆಯ ತಾಯಿಗೆ ಮಾಡಿದ್ದರು. ತನ್ನನ್ನು ಅಪಹರಣಕಾರರಿಂದ ಬಿಡಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯ ಅಳುತ್ತಾ ಅಂಗಲಾಚುತ್ತಿದ್ದ ಧ್ವನಿಯನ್ನೂ ಕರೆಯಲ್ಲಿ ಕೇಳಿಸಲಾಗಿತ್ತು. ಕರೆ ಸ್ವೀಕರಿಸಿದ ತಾಯಿ, ಮಗಳ ಅಳುವ ಧ್ವನಿಯನ್ನು ಆಲಿಸಿ ಅಸ್ವಸ್ಥರಾದರೆ, ಇತ್ತ ಆಕೆಯ ಸಹೋದರಿಯರು ಮತ್ತು ಸಂಬಂಧಿಕರು ಸಮಯಪ್ರಜ್ಞೆಯಿಂದ ಅಪಹರಣಕ್ಕೆ ತುತ್ತಾಗಿದ್ದಾಳೆಂದು ತಿಳಿಸಲಾದ ವಿದ್ಯಾರ್ಥಿನಿ ಮಂಗಳೂರಿನ ಕಾಲೇಜಿನ ತರಗತಿಯಲ್ಲಿ ಸುರಕ್ಷಿತವಾಗಿದ್ದಾಳೆ ಎನ್ನುವುದನ್ನು ಖಾತ್ರಿಪಡಿಸಿಕೊಂಡರು. ಸುಳ್ಳು ಸುದ್ದಿಯನ್ನು ತಿಳಿಸಿ ಬೆದರಿಕೆಯೊಡ್ಡಿ ಹಣ ಕಬಳಿಸುವ ಇದೊಂದು ಜಾಲವೆಂದು ಅವರಿಗೆ ತಿಳಿದುಬಂದಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.