ಉಪ್ಪಿನಂಗಡಿ: ಇಳಂತಿಲ ಗ್ರಾಮದ ನೇಜಿಕಾರ್ ಎಂಬಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಅಕ್ಷರ ಕರಾವಳಿ ಕಟ್ಟಡ ದುರಸ್ತಿ ವಿಚಾರದಲ್ಲಿ ಯಾರ ಮನವಿಗೂ ಆಡಳಿತ ಸ್ಪಂದಿಸದೆ ಛಾವಣಿ ಕುಸಿದು ಇತಿಹಾಸದ ಪುಟ ಸೇರುವಂತಾಗಿದೆ.
ಅಂದು ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿಗಿರುವುದನ್ನು ಮನಗಂಡ ಸರಕಾರ ಗ್ರಾಮಕ್ಕೊಂದು ಸಾಕ್ಷರ ಕೇಂದ್ರ ತೆರೆದು ಅಕ್ಷರ ಜ್ಞಾನವನ್ನು ಮುಟ್ಟಿಸುವ ಯೋಜನೆ ರೂಪಿಸಿತ್ತು. ಅದಕ್ಕಾಗಿ ಗ್ರಾಮ ಪಂಚಾ ಯತ್‌ಗೆ ಪೂರ್ಣ ಅಧಿಕಾರ ಕೊಟ್ಟು ಕಟ್ಟಡ ನಿರ್ಮಿಸುವ ಅಧಿಕಾರ ನೀಡಲಾಗಿತ್ತು.
ಈ ಯೋಜನೆಯಿಂದ ಗ್ರಾಮದಲ್ಲಿ ಆಗ ಹಲವಾರು ಮಹಿಳೆಯರು, ಪುರುಷರು, ಅಕ್ಷರ ಜ್ಞಾನ ಪಡೆಯುವ ಮೂಲಕ ಹೆಬ್ಬೆಟ್ಟು ಬಿಟ್ಟು ಸಹಿ ಮಾಡುವಷ್ಟನ್ನಾದರೂ ಕಲಿತರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅಲ್ಲಿ ಅಕ್ಷರ ಜ್ಞಾನಕ್ಕೆ ಸಂಬಂಧಿಸಿ ಚಟುವಟಿಕೆ ನಿಂತಿತ್ತು. ಹೀಗೆ ವರ್ಷಗಳು ಉರುತ್ತಿದ್ದಂತೆ ಕಟ್ಟಡ ಶಿಥಿಲವಾಗತೊಡಗಿತು. ಆಗ ಗ್ರಾ.ಪಂ. ಸದಸ್ಯರು ಕಟ್ಟಡವನ್ನು ಉಳಿಸಿಕೊಳ್ಳುವಲ್ಲಿ ಆಡಳಿತ ಯಂತ್ರದ ಮೇಲೆ ಒತ್ತಡ ಹೇರಿದ್ದರೂ ಅದನ್ನು ಅಭಿವೃದ್ಧಿಪಡಿಸುವುದು ಬಿಡಿ ದುರಸ್ತಿ ಕಾರ್ಯವನ್ನು ನಡೆಸದೆ ಇದ್ದುದರಿಂದ ಛಾವಣಿ ಕುಸಿಯಿತು. ಇನ್ನೇನು ಗೋಡೆಗಳು ಬೀಳಲು ಆರಂಭವಾಗಿದೆ.
ಗ್ರಾ.ಪಂ. ಸದಸ್ಯ ಇಸುಬು ಪೆದಮಲೆ ಪತ್ರಿಕ್ರಿಯಿಸಿ ಹಲವು ಬಾರಿ ಅಲ್ಲಿನ ಸಮಸ್ಯೆಯ ಕುರಿತದು ಪಂಚಾಯತ್‌ನ ಸಾಮಾನ್ಯ ಸಭೆಗಳಲ್ಲಿ ವಿಚಾರ ಮಂಡಿಸಿದರೂ ಸದಸ್ಯರ ಮಾತಿಗೆ ಬೆಲೆ ಕೊಡದಿರುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಕಿಡಿ ಕಾರಿದ್ದಾರೆ.
ಸ್ವೋದ್ಯೋಗ ಕೇಂದ್ರವಾಗಿಸಬಹುದಿತ್ತು
ಗ್ರಾ.ಪಂ.ನ ಇಚ್ಛಾ ಶಕ್ತಿ ಕೊರತೆಯಿಂದ ಇದ್ದ ಕಟ್ಟಡ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸರಕಾರಿ ಕಟ್ಟಡ ಅವರಿಗೆ ಉಪಯೋಗ ಇಲ್ಲದೆ ಇದ್ದರೂ ರಿಪೇರಿ ಪಡಿಸಿ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವೋದ್ಯೋಗ ಕೇಂದ್ರವಾಗಿ ರೂಪಿಸಿ ಅಭಿವೃದ್ಧಿಪಡಿಸಬೇಕಾಗಿತ್ತು ಎಂದು ಜನಾರ್ದನ ಪೂಜಾರಿ ನೂಜ ಹೇಳಿದ್ದಾರೆ.