Advertisement

ಪೆನ್ನು ಹಿಡಿಯುವ ಕೈಯಲ್ಲಿ ತಕ್ಕಡಿ; ನೋಟ್‌ಬುಕ್‌ ಬದಲು ನೋಟು!

12:26 PM Nov 18, 2018 | Team Udayavani |

ಉಪ್ಪಿನಂಗಡಿ: ಶಾಲಾ ಕಾಲೇಜುಗಳಲ್ಲಿ ಮೆಟ್ರಿಕ್‌ ಮೇಳವನ್ನು ಯೋಜಿಸುವುದರಿಂದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನವನ್ನು ಮೂಡಿಸಲು ಸಾಧ್ಯ. ವಿದ್ಯಾರ್ಥಿಗಳಿಂದಲೇ ವ್ಯವಹಾರ ನಡೆಸುವ, ವಿವಿಧ ಪ್ರದರ್ಶನಗಳನ್ನು ವಿದ್ಯಾರ್ಥಿಗಳೇ ಆಯೋಜಿಸುವ ಮೂಲಕ ಆರ್ಥಿಕ ಸಂಪನ್ಮೂಲವನ್ನು ವೃದ್ಧಿಸುವ ಕಲೆಯನ್ನು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮವಾಗಿ ಪ್ರದರ್ಶಿಸಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಯೋಜಿಸಲ್ಪಟ್ಟ ಮೆಟ್ರಿಕ್‌ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಮುರಳೀಧರ ಕೆ. ಮಾತನಾಡಿ, ಮಕ್ಕಳಲ್ಲಿ ಜೀವನ ಪಾಠವನ್ನು ಕಲಿಸುವ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ವಿಯಾಗಿದೆ ಎಂದರು.

ಚೌಕಾಸಿಗೆ ಮಣಿಯಲಿಲ್ಲ
ಮೆಟ್ರಿಕ್‌ ಮೇಳದಲ್ಲಿ ತರಕಾರಿ ಮಾರಾಟ ಮಳಿಗೆಯನ್ನು ನಿರ್ವಹಿಸಿದ ವಿದ್ಯಾರ್ಥಿಗಳ ಪೈಕಿ ಸಿಯಾಬ್‌ ಎಂಬ ಪಿಯುಸಿ ವಿದ್ಯಾರ್ಥಿ ಚೌಕಾಸಿ ಮನೋಭಾವದ ಗ್ರಾಹಕರನ್ನು ನಿಭಾಯಿಸಿದ ಶೈಲಿ ಗಮನ ಸೆಳೆಯಿತು. ಹಾರಾರ್‌ ಶೋ ಎಂಬ ಹೆಸರಿನ ಭಯಾನಕ ಜಗತ್ತನ್ನು ಸೃಷ್ಟಿಸಿದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಯಿತು. ಅತೀ ಹೆಚ್ಚು ವೀಕ್ಷಕರು ನೆರೆದಿದ್ದು, ಸ್ಥಳದ ಅಭಾವ ಉಂಟಾಗಿತ್ತು. ಭಯ ಹಾಗೂ ಮನೋರಂಜನೆಯನ್ನು ಒದಗಿಸಲು ಸಫ‌ಲತೆ ಕಾಣುವುದರೊಂದಿಗೆ ನಮ್ಮ ಶ್ರಮ ಯಶಸ್ವಿಯಾಗಿದೆ ಎಂದು ತಂಡದ ಸದಸ್ಯ ವರುಣ್‌ ಹರಿಪ್ರಸಾದ್‌ ಸಂತಸ ವ್ಯಕ್ತಪಡಿಸಿದರು.

ಬಹು ಬೇಡಿಕೆಯ ಗಂಜಿ ಊಟ
ಮೇಳದಲ್ಲಿ ವಿದ್ಯಾರ್ಥಿಗಳೇ ನಿರ್ವಹಿಸಿದ ಹೊಟೇಲ್‌ ಉದ್ಯಮದಲ್ಲಿ ಬಗೆ ಬಗೆಯ ತಿಂಡಿಗಳು, ಚಹಾ ಮಾರಾಟವಾಗಿದ್ದು, ಮಧ್ಯಾಹ್ನದ ವೇಳೆ ಗಂಜಿ ಊಟ, ತೊಂಡೆಕಾಯಿ ಪಲ್ಯ, ಸಾಂಬಾರು, ಹುರುಳಿ ಚಟ್ನಿ, ಕಾಯಿಸಿದ ಮೆಣಸು, ಜೈನರ ಶೈಲಿಯ ಉಪ್ಪಿನಕಾಯಿ ನೀಡಲಾಗಿದ್ದು, ಬಹು ಬೇಡಿಕೆ ಪಡೆಯಿತು. ಹೊಟೇಲ್‌ ಕಾರ್ಮಿಕರಾಗಿ ಶ್ರಮಿಸಿದ ವಿದ್ಯಾರ್ಥಿಗಳ ಕಾರ್ಯಶೈಲಿಯು ಸ್ನೇಹಪರತೆ ಹಾಗೂ ವೃತ್ತಿಪರತೆ ಕಂಡು ಬಂದಿತ್ತು.

ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್‌ .ಎ. ನಾಯಕ್‌, ಟ್ರಸ್ಟಿ ವಸಂತಿ ನಾಯಕ್‌, ಇಂದ್ರಪ್ರಸ್ಥ ಪಿ.ಯು. ಕಾಲೇಜಿನ ಪ್ರಾಂಶುಪಾಲ ರವೀಂದ್ರ ದರ್ಬೆ, ಪ್ರೌಢ ವಿಭಾಗದ ಪ್ರಾಂಶುಪಾಲೆ ಮಾಲತಿ, ಪ್ರಾಥಮಿಕ ವಿಭಾಗದ ಪ್ರಾಂಶುಪಾಲ ಜೋಸ್‌, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲಾ ಶಿಕ್ಷಕ ಗುಡ್ಡಪ್ಪ ಬಲ್ಯ, ಚಲನಚಿತ್ರ ನಿರ್ಮಾಪಕ ಸಚಿನ್‌ ಎಸ್‌., ಉದ್ಯಮಿಗಳಾದ ಯು. ರಾಜೇಶ್‌ ಪೈ, ಬಿ. ಗಣೇಶ್‌ ಶೆಣೈ, ಸುಂದರ ಗೌಡ ಕೇಶವ ಗೌಡ ಬಜತ್ತೂರು ಡಾ| ಕೈಲಾರ್‌ ರಾಜ್‌ಗೋಪಾಲ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ವ್ಯಾಪಾರಿಗಳಾದ ವಿದ್ಯಾರ್ಥಿಗಳು
 ನಮ್ಮ ಮಳಿಗೆಗೆ ಬನ್ನಿ ಎನ್ನುತ್ತಿದ್ದ ವಿದ್ಯಾರ್ಥಿಗಳು ತಮ್ಮ ವ್ಯಾಪಾರ ಶೈಲಿಗೆ ಶಕ್ತಿ ತುಂಬಿದರು. ಎಳನೀರು, ಪುಂಡಿ ಗಸಿ, ಪಲಾವ್‌, ಅವಲಕ್ಕಿ, ತಂಪಾದ ಕಬ್ಬಿನ ಹಾಲು, ಸೌಂದರ್ಯವರ್ಧಕ, ಆಭರಣ, ಪಾತ್ರೆ ಪಗಡಿಗಳು, ತರಕಾರಿ, ತಿಂಡಿ ತಿನಸುಗಳು – ಹೀಗೆ ಬಹು ಬಗೆಯ ವಸ್ತುಗಳಿಗಾಗಿ ನಮ್ಮ ಮಳಿಗೆಗೆ ಬನ್ನಿ ಎಂದು ಕೈ ಬೀಸಿ ಕರೆಯುವ ಪುಟಾಣಿ ವ್ಯಾಪಾರಿಗಳು, ತ್ರಿಡಿ ಶೋ, ಯಕ್ಷಿಣಿ ವಿದ್ಯೆ, ಕಲಾ ಜಗತ್ತು ಕನಿಷ್ಠ ಬಂಡವಾಳದಲ್ಲಿ ಗರಿಷ್ಠ ಆದಾಯವನ್ನು ತಂದುಕೊಟ್ಟವು.

Advertisement

Udayavani is now on Telegram. Click here to join our channel and stay updated with the latest news.

Next