ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇಗುಲದ ಮಹಾಕಾಳಿ ದೇವಿಯ ಮೆಚ್ಚಿ ಉತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಸಡಗರದೊಂದಿಗೆ ಶುಕ್ರವಾರ ರಾತ್ರಿ ನಡೆಯಿತು.
ರಥಬೀದಿಯ ದೈವಾರಾಧಕರ ಕಟ್ಟೆಯಲ್ಲಿ ನಲಿಕೆ ಮನೆತನದವರಿಂದ ರಚಿಸಲಾದ ಶ್ರೀ ದೇವಿಯ ಮುಡಿ ಅಣಿಗಳನ್ನು ಪ್ರಾರಂಪರಿಕ ವಿಧಿ ವಿಧಾನಗಳೊಂದಿಗೆ ಶ್ರೀ ದೇವಿಯ ಸನ್ನಿಧಿಗೆ ತಂದಿರಿಸಿದ ಬಳಿಕ ಮೆಚ್ಚಿಯ ನಡಾವಳಿಗೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಶ್ರೀ ದೇವಿಯ ಮುಡಿಗೆ ಮಲ್ಲಿಗೆ ಹೂವನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಮಹಾಕಾಳಿ ದೇವಿಯ ಗುಡಿಯಲ್ಲಿ ಭಕ್ತರು ಶ್ರೀ ದೇವಿಗೆ ಕುಂಕುಮಾರ್ಚನೆ ಸೇವೆ ಸಲ್ಲಿಸಿದರು.
ಮಹಾಕಾಳಿ ನೇಮದ ಅಂಗವಾಗಿ ಇಲ್ಲಿನ ಕಾಳಿಕಾಂಬಾ ಭಜನ ಮಂಡಳಿಯ ಆಶ್ರಯದಲ್ಲಿ 5,000ಕ್ಕೂ ಹೆಚ್ಚು ಮಂದಿಗೆ ಪಾರಂಪರಿಕ ಸೋಜಿ ವಿತರಣೆಯನ್ನು ನಡೆಸಲಾಯಿತು. ದೇಗುಲದ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ ರಘುನಾಥ ರೈ, ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ, ಸಮಿತಿ ಸದಸ್ಯರಾದ ಡಾ| ರಾಜಾರಾಮ ಕೆ.ಬಿ., ರಾಧಾಕೃಷ್ಣ ನಾೖಕ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸೋಮನಾಥ, ಅರ್ತಿಲ ಕೃಷ್ಣರಾವ್, ಸವಿತಾ ಹರೀಶ್, ಅನಿತಾ ಕೆ., ಗಣ್ಯರಾದ ಕರುಣಾಕರ ಸುವರ್ಣ, ಧನ್ಯಕುಮಾರ್ ರೈ, ಪ್ರಶಾಂತ್ ಶಿವಾಜಿನಗರ, ಯತೀಶ್ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಭಾಸ್ಕರ್ ಆಚಾರ್ಯ, ಕೆ. ಸುಧಾಕರ ಶೆಟ್ಟಿ, ಚಂದ್ರಹಾಸ ಹೆಗ್ಡೆ, ವಿಜಯ ಕುಮಾರ್ ಕಲ್ಲಳಿಕೆ, ಸುಂದರ ಗೌಡ, ಬಿ.ಕೆ. ಆನಂದ, ಕೈಲಾರ್ ರಾಜ್ ಗೋಪಾಲ ಭಟ್, ಪುಷ್ಪಕರ್ ನಾಯಕ್, ಸುಧಾಕರ ಶೆಟ್ಟಿ, ಎಂ. ವರದರಾಜ್, ವಿನಿತ್ ಶಗ್ರಿತ್ತಾಯ, ಕೆ. ಜಗದೀಶ್ ಶೆಟ್ಟಿ ಭಾಗವಹಿಸಿದ್ದರು.
ದೈವಗಳ ನೇಮ
ಶ್ರೀ ದೇವರ ಗುಡಿಯ ಮುಂಭಾಗದಲ್ಲಿ ಎಣ್ಣೆಬೂಳ್ಯ ಪಡೆದು ದೇಗುಲದ ನೇಮದ ಗದ್ದೆಯಲ್ಲಿ ನೇಮ-ನಡಾವಳಿಗಳು ನಡೆದವು. ಬಳಿಕ ದೇಗುಲದಲ್ಲಿನ ಪರಿವಾರ ದೈವಗಳ ನೇಮ ಶನಿವಾರ ನಸುಕಿನ ವೇಳೆ ನಡೆಯಿತು.