ಉಪ್ಪಿನಂಗಡಿ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರ ಜತೆ ಮಾತನಾಡುತ್ತ ಅವರ ಕೈಯಿಂದಲೇ 14 ಗ್ರಾಂ ತೂಕದ ಚಿನ್ನದ ಸರವನ್ನು ಪಡೆದು ವಂಚಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ವಂಚಿಸಿದ ಚಿನ್ನಾಭರಣವನ್ನು ಮಾರಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉಪ್ಪಳ ಕೈಕಂಬ ನಿವಾಸಿ ಮಹಮ್ಮದ್ ಮುಸ್ತಾಫ ಟಿ. ಎಂ. ಯಾನೆ ಕತ್ತಿ ಮುಸ್ತಾಫ (46) ವಂಚಿಸಿದ ಆರೋಪಿ.
ಆತನಿಂದ ಉಪ್ಪಿನಂಗಡಿ ಪ್ರಕರಣ ಸಹಿತ ಕಡಬ ಠಾಣಾ ವ್ಯಾಪ್ತಿಯ ದೋಳ್ಪಾಡಿ ಮತ್ತು ಮರ್ಧಾಳದಿಂದ ಎಗರಿಸಿದ ಚಿನ್ನಾಭರಣಗಳ ಸಹಿತ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಧಾನಿ ಮೋದಿಯ ಹಣ ಬಂದಿದೆ ಎಂಬ ಸುಳ್ಳು ಮಾಹಿತಿ ನೀಡಿ ಮರಳು ಮಾಡುವುದು, ತಾನೋರ್ವ ಬ್ಯಾಂಕ್ ಅಧಿಕಾರಿಯೆಂದು ಹೇಳಿ ಆಧಾರ್ ಕಾರ್ಡ್ ಜತೆ 7 ಸಾವಿರ ರೂ. ನೀಡಿದರೆ ಈ ಕ್ಷಣದಲ್ಲೇ ಹಣ ನಿಮ್ಮ ಖಾತೆಗೆ ಜಮೆ ಮಾಡುವ ಹೊಣೆ ನನ್ನದು ಎಂದು ಹೇಳಿ ಈತ ವಂಚಿಸುತ್ತಿದ್ದ. ಈತನ ಮಾತಿನ ಮೋಡಿಗೆ ಮರಳಾಗಿ ಹಲವು ಮಂದಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಸಣ್ಣ ಮೊತ್ತವನ್ನು ವಂಚಿಸಿದರೆ ಅದಕ್ಕಾಗಿ ಯಾರೂ ಪೊಲೀಸರಿಗೆ ದೂರು ಕೊಡಲು ಮುಂದಾಗುವುದಿಲ್ಲವೆಂದು 7 ಸಾವಿರ ರೂ. ಮಿತಿಯೊಳಗೆ ವಂಚನೆ ನಡೆಸುತ್ತಿದ್ದೆ. ಅಪರೂಪಕ್ಕೆ ಜನರಲ್ಲಿ ಹಣವಿಲ್ಲದಿದ್ದಾಗ ಚಿನ್ನಾಭರಣದತ್ತ ಗಮನ ಹರಿಸುತ್ತಿದ್ದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.