Advertisement

Uppinangady ಮೂರು ದಾರಿ ಸೇರುವಲ್ಲಿ ತೆಂಗಿನಕಾಯಿ ಒಡೆದ ದಂಪತಿ

12:13 AM Aug 09, 2024 | Team Udayavani |

ಉಪ್ಪಿನಂಗಡಿ: ದಂಪತಿಯೊಬ್ಬರು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪಂಚಾಯತ್‌ ಕಚೇರಿ ಮುಂಭಾಗ ತೆಂಗಿನಕಾಯಿ ಒಡೆದು ತಮ್ಮ ಮುಗ್ಧ ಭಕ್ತಿಯನ್ನು ಪ್ರದರ್ಶಿಸಿದ್ದರು. ಆದರೆ ಇವರ ಈ ನಡೆ ಪಂಚಾಯತ್‌ ಆಡಳಿತಗಾರರಲ್ಲಿ ಹಲವು ಪ್ರಶ್ನೆ ಮೂಡುವಂತೆ ಮಾಡಿದ ಘಟನೆ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ.

Advertisement

ಗುರುವಾರ ಪಂಚಾಯತ್‌ ಕಚೇರಿಯ ಸಿಸಿ ಕೆಮರಾ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾಗ ಬುಧವಾರ ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಪಂಚಾಯತ್‌ ಕಚೇರಿ ಗೇಟಿನ ಮುಂಭಾಗದಲ್ಲಿ ದಂಪತಿ ನಿಂತಿರುವುದು, ಸಮೀಪದಲ್ಲಿ ನಿಂತಿದ್ದ ವಾಹನವೊಂದು ಹೋಗುವುದನ್ನು ಕಾಯುತ್ತಿದ್ದುದು, ವಾಹನ ಹೋದ ಕೂಡಲೇ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ಪ್ರವೇಶದ್ವಾರದ ಮುಂಭಾಗದಲ್ಲಿ ಒಡೆದು ಹಿಂದಿರುಗುತ್ತಿದ್ದ ಕೃತ್ಯಗಳೆಲ್ಲವೂ ಕಂಡುಬಂದಿತ್ತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರಿಬ್ಬರು ಸ್ಥಳೀಯ ನಿವಾಸಿಗರೆನ್ನುವುದು ದೃಢವಾಯಿತು.

ಪಂಚಾಯತ್‌ ಕಚೇರಿಯ ಗೇಟಿನ ಬಳಿ ತೆಂಗಿನಕಾಯಿ ಒಡೆಯ ಬೇಕಾದರೆ ಯಾವುದೋ ವಾಮಾಚಾರ ಮಾಡಿರಬಹುದೆಂಬ ಶಂಕೆ ಪಂಚಾಯತ್‌ ಆಡಳಿತಗಾರರನ್ನು ಕಾಡಿತು. ಈ ಬಗ್ಗೆ ವ್ಯಾಪಕ ವಿಚಾರಣೆ ನಡೆಸಿ ದೊರೆತ ಉತ್ತರಗಳಿಂದ ತೃಪ್ತರಾಗದೆ ಮತ್ತಷ್ಟು ವಿಚಾರಣೆ ನಡೆಸಿದಾಗ ಅವರ ಮುಗ್ಧ ಭಕ್ತಿ ಗೋಚರಿಸಿತು.ತನ್ನ ಇಷ್ಟಾರ್ಥ ಸಿದ್ದಿಗಾಗಿ ಮಾಡಿದ ಪೂಜೆಗೆ ಒಳಪಡಿಸಿದ್ದ ತೆಂಗಿನ ಕಾಯಿಯನ್ನು ಮೂರು ಮಾರ್ಗ ಸೇರುವಲ್ಲಿ ಒಡೆಯಿರಿ ಎಂದು ಸೂಚನೆ ನೀಡಲಾಗಿತ್ತಂತೆ. ಪಂಚಾಯತ್‌ಗೆ ಹೋಗುವ ದಾರಿಯನ್ನು ಒಂದು ರಸ್ತೆ ಎಂದು ಪರಿಗಣಿಸಿ ಪಕ್ಕದ ಹೆದ್ದಾರಿ ಮತ್ತು ಹಳೇ ಸೇತುವೆಯ ಸಂಪರ್ಕ ರಸ್ತೆ ಸೇರಿದರೆ ಮೂರು ಮಾರ್ಗ(ರಸ್ತೆ) ಆಗುತ್ತದೆ ಎಂದು ಭಾವಿಸಿ ಆ ದಂಪತಿ ಅಲ್ಲಿಯೇ ತೆಂಗಿನ ಕಾಯಿ ಒಡೆದು ಮನೆಗೆ ನಿರ್ಗಮಿಸಿದ್ದರು.

ದಂಪತಿಯ ಈ ಮೂರು ರಸ್ತೆಯ ಭಾವಿಸುವಿಕೆಯಿಂದ ವಾಮಾಚಾರದ ಶಂಕೆ ಉದ್ಭವಿಸಿ ಪಂಚಾಯತ್‌ ಆಡಳಿತಗಾರರನ್ನು ದಿನವಿಡೀ ಸತ್ಯ ಶೋಧನೆಗೆ ತೊಡಗುವಂತೆ ಮಾಡಿತ್ತು. ಪೂಜೆ ಮಾಡಿದ ಪುರೋಹಿತರಿಂದ ತೊಡಗಿ ದಂಪತಿಗೆ ಪರಿಚಯಸ್ಥರೆಲ್ಲರೂ ವಿಚಾರಣೆಗೆ ಒಳಪಟ್ಟು ಹೈರಾಣಾಗಿ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next