Advertisement

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

02:05 AM Jul 07, 2022 | Team Udayavani |

ಉಪ್ಪಿನಂಗಡಿ: ಮೈದುಂಬಿ ಹರಿಯುತ್ತಿರುವ ಕುಮಾರಧಾರಾ- ನೇತ್ರಾವತಿ ನದಿಗಳು ಉಪ್ಪಿನಂಗಡಿ ಪರಿಸರದಲ್ಲಿ ನೆರೆ ಭೀತಿಯನ್ನು ಹುಟ್ಟು ಹಾಕಿವೆ. ಉಭಯ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ.

Advertisement

ಸಹಸ್ರಲಿಂಗೇಶ್ವರ-ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಸಂಜೆ ವೇಳೆಗೆ 6 ಮೆಟ್ಟಿಲುಗಳಷ್ಟೇ ಕಾಣಿಸುತ್ತಿವೆ. ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ 29.0 ಮೀ. ನೀರಿನ ಪ್ರಮಾಣ ದಾಖಲಾಗಿದ್ದು, ಅಪಾಯದ ಮಟ್ಟ 30 ಮೀ. ಆಗಿದೆ.

ತಹಶೀಲ್ದಾರ್‌ ಭೇಟಿ
ಪುತ್ತೂರು ತಹಶೀಲ್ದಾರ್‌ ನಿಸರ್ಗ ಪ್ರಿಯ ಉಪ್ಪಿನಂಗಡಿಗೆ ಆಗಮಿಸಿ, ಗೃಹ ರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್‌ ಬೋಟ್‌ನಲ್ಲಿ ಸಂಚರಿಸಿ ಬೋಟ್‌ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದರು.

ಉಪತಹಶೀಲ್ದಾರ್‌ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ರಂಜನ್‌, ಗ್ರಾಮಕರಣಿಕ ಜಿತೇಶ್‌ ವಿ., ಗ್ರಾಮ ಸಹಾಯಕ ಯತೀಶ್‌, ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್‌, ಸೆಕ್ಷನ್‌ ಲೀಡರ್‌ ಜನಾರ್ದನ ಆಚಾರ್ಯ, ಗೃಹರಕ್ಷಕರಾದ ಸಮದ್‌, ಪ್ರಶಾಂತ್‌, ಈಜುಗಾರರಾದ ಸುದರ್ಶನ್‌ ನೆಕ್ಕಿಲಾಡಿ, ವಿಶ್ವನಾಥ್‌, ಮುಹಮ್ಮದ್‌ ಬಂದಾರು ಇದ್ದರು.

ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!
ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂ ಸ್ಥಳೀಯವಾಗಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೆರೆ ನೀರು ಏರಿಕೆಯಾಗಿದ್ದು ಕಳೆದ ನಾಲ್ಕು ದಿನಗಳಿಂದ ಸ್ನಾನಘಟ್ಟ ಮುಳುಗಡೆಯಾಗಿಯೇ ಇದೆ.

Advertisement

ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದ್ದು, ಗೇಟ್‌ ವರೆಗೆ ನೀರು ತಲುಪಿದೆ. ಭಕ್ತರು ನೀರಿನ ತೀರದಲ್ಲಿ ತೀರ್ಥ ಸ್ನಾನ ನೆರವೇರಿಸುತ್ತಿದ್ದಾರೆ. ಮುಂಜಾಗ್ರತಾ ಹಿನ್ನಲೆಯಲ್ಲಿ ಗೃಹರಕ್ಷಕ ದಳದ ಸಿಬಂದಿ ಹಗಲು-ರಾತ್ರಿ ನದಿ ಬಳಿ ಕರ್ತವ್ಯದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next