ಉಪ್ಪಿನಂಗಡಿ: ತಾನೋರ್ವ ಸಿಮ್ ಕಂಪೆನಿಯ ಅಧಿಕಾರಿ. 5ಜಿ ಟವರ್ ಈ ಭಾಗಗಳಲ್ಲಿ ಆಗಬೇಕಿದೆ. ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಮಂಗಳೂರಿನಿಂದ ತರಲಿಕ್ಕಿದೆ. ನನಗೆ 28 ದಿನಗಳ ಕಾಲ ಪ್ರತಿದಿನ ಎರಡು ಬಾರಿ ಮಂಗಳೂರಿಗೆ ಹೋಗಿ ಟವರ್‌ನ ಸಾಮಗ್ರಿ ತರಲು ಎರಡು ಪಿಕಪ್ ವಾಹನ ಬೇಕೆಂದು ನಂಬಿಸಿದ ವ್ಯಕ್ತಿಯೋರ್ವ ಉಪ್ಪಿನಂಗಡಿಯಿಂದ ಪಿಕಪ್ ಬಾಡಿಗೆಗೆ ಪಡೆದು ಮಂಗಳೂರಿಗೆ ಹೋಗಿ ಅಲ್ಲಿ ಪಿಕಪ್ ಚಾಲಕನ ಕೈಯಿಂದ ಎಂಟೂವರೆ ಸಾವಿರ ರೂ. ಪಡೆದು ನಾಪತ್ತೆಯಾದ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದೆ.
ಸಿಮ್ ಕಂಪೆನಿಯೊಂದರ ಅಧಿಕಾರಿಯೆಂದು ಹೇಳಿ ಲಾಡ್ಜ್ವೊಂದಕ್ಕೆ ಆಗಮಿಸಿದ ವ್ಯಕ್ತಿಯೋರ್ವ ಒಂದು ತಿಂಗಳ ಕಾಲ ಅಧಿಕಾರಿಗಳಿಗೆ ತಂಗಲು ಮೂರು ಎಸಿ ರೂಂ ಹಾಗೂ ಕಾರ್ಮಿಕರಿಗೆ ತಂಗಲು ಎರಡು ನಾನ್ ಎಸಿ ರೂಂ ಬೇಕಾಗಿದೆಯೆಂದು ಹೇಳಿದ್ದ. ಆಬಳಿಕ ಮಂಗಳೂರಿನಿಂದ ಸಾಮಗ್ರಿ ತರಲು ಎರಡು ಪಿಕಪ್ ಬೇಕೆಂದು ಕೇಳಿದಾಗ ಲಾಡ್ಜ್ ಮಾಲಕರು ತಮ್ಮ ಪರಿಚಯದ ಪಿಕಪ್ ಚಾಲಕರಿಗೆ ವಿಷಯ ತಿಳಿಸಿ ಮಾತನಾಡಿ ಎಂದಿದ್ದರು.
ಪಿಕಪ್ ಚಾಲಕರು ಆತನಲ್ಲಿ ಮಾತನಾಡಿ ಬಾಡಿಗೆಗೆ ಬರುತ್ತೇವೆ ಎಂದು ಒಪ್ಪಿಕೊಂಡರು. ಪಿಕಪ್ ಚಾಲಕ ನವೀನ್ ಹತ್ತಿರ ಆತ ಮಾತನಾಡಿ ರೈಲಿನಲ್ಲಿ ಟವರ್‌ನ ಸಾಮಗ್ರಿ ಬರುತ್ತವೆ. ಹೀಗಾಗಿ ಮಂಗಳೂರಿಗೆ ಹೋಗುವ ಎಂದಿದ್ದ, ಅದಕ್ಕೆ ಒಪ್ಪಿದ ಪಿಕಪ್ ಚಾಲಕರು ಆತನೊಂದಿಗೆ ಮಂಗಳೂರಿಗೆ ತೆರಳಿದ್ದಾರೆ.
ಸಿಮ್ ಅಧಿಕಾರಿ ಒಂದು ಪಿಕಪ್ ಅನ್ನು ಪಡೀಲ್ ಬಳಿಯ ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಲ್ಲಲು ಹೇಳಿದ್ದ. ಅಲ್ಲಿ ನಮ್ಮ ಕಾರ್ಮಿಕರು ಪಿಕಪ್‌ಗೆ ಸಾಮಗ್ರಿ ತುಂಬಿಸಿದ ಬಳಿಕ ಉಪ್ಪಿನಂಗಡಿಗೆ ಹೋಗಬೇಕೆಂದು ತಿಳಿಸಿದ್ದ. ಇನ್ನೊಂದು ಪಿಕಪ್‌ನಲ್ಲಿ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ವೇಳೆ ಸಿಮ್ ಅಧಿಕಾರಿ ಆತನಲ್ಲಿ ನಮ್ಮಲ್ಲಿ 100 ಲೀ ಡೀಸೆಲ್ ಇದೆ ಅದನ್ನು ನಿಮಗೆ ಕಡಿಮೆಗೆ ಕೊಡುತ್ತೇನೆ ಅದಕ್ಕಾಗಿ ಆರು ಸಾವಿರ ರೂ.ಗಳನ್ನು ಪಿಕಪ್ ಚಾಲಕನಿಂದ ಮುಂಗಡವಾಗಿ ಪಡೆದಿದ್ದ.
ಸ್ವಲ್ಪ ದೂರ ಹೋದ ಬಳಿಕ ಎಟಿಎಂಗಳಿಗೆ ಹೋಗಿ ಹಣ ಸಿಗಲಿಲ್ಲವೆಂದು ಹೇಳಿ ಚಾಲಕನಿಂದ ಮತ್ತೆ 5 ಸಾವಿರ ರೂ. ಕೊಡಿ ಮತ್ತೆ ನೀಡುತ್ತೇನೆ ಎಂದಿದ್ದ. ಸಿಮ್ ಅಧಿಕಾರಿಯ ಮೋಸದ ಮಾತು ಕೇಳಿ ತನ್ನಲ್ಲಿದ್ದ ಎರಡೂವರೆ ಸಾವಿರ ರೂ. ನೀಡಿದ್ದಾರೆ. ರೈಲ್ವೇ ನಿಲ್ದಾಣ ತಲುಪಿದ ಬಳಿಕ ಟವರ್ ಸಾಮಗ್ರಿ ಬಂದ ಕೂಡಲೇ ತಿಳಿಸುತ್ತೇನೆಂದು ಹೇಳಿ ಹೋಗಿದ್ದ. ಸಂಜೆಯಾದರೂ ವ್ಯಕ್ತಿಯ ಸುಳಿವು ಕಾಣದಿದ್ದಾಗ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಬಳಿಕ ಪಡೀಲ್‌ಗೆ ಹೋಗಿದ್ದ ಪಿಕಪ್ ಚಾಲಕನಿಗೆ ಕರೆ ಮಾಡಿದಾಗ ತಾವು ಮೋಸ ಹೋಗಿರುವುದು ಅವರಿಗೆ ಅರಿವಾಯಿತು.