Advertisement

ಉಪ್ಪಿನಂಗಡಿ: ವ್ಯಕ್ತಿಯ ಕೈಯಲ್ಲಿದ್ದ 10 ಲಕ್ಷ ರೂ. ದರೋಡೆಗೈದ ಅಪರಿಚಿತ ವ್ಯಕ್ತಿ

12:15 AM Mar 22, 2023 | Team Udayavani |

ಉಪ್ಪಿನಂಗಡಿ: ವ್ಯಕ್ತಿಯೋರ್ವರ ಕೈಯಲ್ಲಿದ್ದ 10 ಲಕ್ಷ ರೂ. ಕಟ್ಟನ್ನು ಅಪರಿಚಿತನೋರ್ವ ದರೋಡೆ ನಡೆಸಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪೆದಮಲೆ- ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಮಾ. 20ರಂದು ಮಧ್ಯಾಹ್ನ ನಡೆದಿದೆ.

Advertisement

ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮುಹಮ್ಮದ್‌ ಕೆ. ಎಂಬವರು ದರೋಡೆಗೊಳಗಾದವರು. ಮುಹಮ್ಮದ್‌ ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ ರೂ.ವನ್ನು ಕಳವು ಮಾಡಲಾಗಿದೆ. ಅವರು ದ್ವಿಚಕ್ರ ವಾಹನದ ಸೀಟಿನ್ನೆತ್ತಿ ಹಣದ ಕಟ್ಟನ್ನು ಅದರಲ್ಲಿ ಇಡುತ್ತಿದ್ದಂತೆಯೇ ಮುಹಮ್ಮದ್‌ ಅವರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದಾನೆ. ಮುಹಮ್ಮದ್‌ ಅವರು ಈತನನ್ನು ಸ್ವಲ್ಪ ದೂರದವರೆಗೆ ಬೆನ್ನಟ್ಟಿಕೊಂಡು ಹೋಗಿದ್ದು, ಆದರೆ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ದರೋಡೆಕೋರ ಪ್ಯಾಂಟ್‌ ಹಾಗೂ ಟೀ ಶರ್ಟ್‌ ಧರಿಸಿದ್ದ ಎಂದು ಮುಹಮ್ಮದ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಮುಹಮ್ಮದ್‌ ಅವರು ದರೋಡೆಗೊಳಗಾದ ವಿಷಯವನ್ನು ಸಂಬಂಧಿಕರಿಗೆ ತಿಳಿಸಿ, ಚರ್ಚಿಸಿ ಪೊಲೀಸ್‌ ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇಬ್ಬರು ವಶಕ್ಕೆ
ಈ ಪ್ರಕರಣಕ್ಕೆ ಸಂಬಂಧಿಸಿ ರಿಫಾಯಿನಗರ ಪರಿಸರದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next