Advertisement

ಮಂಕುಬೂದಿ ಎರಚಿ ಮಹಿಳೆ ಮಾಂಗಲ್ಯ ಸರ ಎಗರಿಸಿದ

12:17 AM Oct 02, 2022 | Team Udayavani |

ಉಪ್ಪಿನಂಗಡಿ: ಚಿನ್ನಾಭರಣದ ಅಂಗಡಿ ತೆರೆಯುತ್ತಿದ್ದೇವೆ. ಆಶೀರ್ವಾದ ಮಾಡಿ ಎಂದು ನಂಬಿಸಿ ಮಂಕುಬೂದಿ ಎರಚಿ ಅರ್ಚಕರ ಪತ್ನಿಯ ಕತ್ತಿನಲ್ಲಿದ್ದ ಮೂರೂವರೆ ಪವನ್‌ ತೂಕದ ಚಿನ್ನದ ಮಾಂಗಲ್ಯ ಸರವನ್ನು ಹಾಡಹಗಲೇ ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.

Advertisement

ಉಪ್ಪಿನಂಗಡಿಯ ರಥಬೀದಿಯಲ್ಲಿರುವ ದೇಗುಲಕ್ಕೆ ಹೋಗುವ ದಾರಿಯಲ್ಲಿನ ಅರ್ಚಕರ ಮನೆ ಬಾಗಿಲಿಗೆ ಬಂದ ವ್ಯಕ್ತಿಯೋರ್ವ ಮನೆಯಲ್ಲಿದ್ದ ಅರ್ಚಕರ ಪತ್ನಿಯಲ್ಲಿ ತನಗೆ ಸೂತಕವಿರುವುದರಿಂದ ದೇಗುಲಕ್ಕೆ ಹೋಗಲಾಗುವುದಿಲ್ಲ. ದೇವರಿಗೆ ಹರಕೆ ರೂಪದಲ್ಲಿ ತನ್ನ ಪರವಾಗಿ ಮುನ್ನೂರು ರೂಪಾಯಿ ಸಲ್ಲಿಸಿ ಎಂದು ತಲಾ 100 ರೂ.ಯ 3 ನೋಟುಗಳನ್ನು ನೀಡಿದ್ದ. ಬಳಿಕ ಅದರಲ್ಲಿ ಒಂದು ನೋಟನ್ನು ವಾಪಸು ಪಡೆದು ಆ ನೋಟನ್ನು ಮತ್ತೆ ಅವರ ಕೈಗಿತ್ತು ನಿಮ್ಮ ಮಾಂಗಲ್ಯ ಸರವನ್ನು ಅದಕ್ಕೆ ಸ್ಪರ್ಶಿಸಿ ಹಣವನ್ನು ಹಿಂದಿರುಗಿಸಲು ಹೇಳಿದ್ದ.

ಮಹಿಳೆ ಪ್ರಶ್ನಿಸಿದ್ದರು
ಈ ವೇಳೆ ನನ್ನ ಮಾಂಗಲ್ಯ ಸರವನ್ನು ನಿಮ್ಮ ನೋಟಿಗೆ ಯಾಕೆ ಸ್ಪರ್ಶಿಸಬೇಕು ಎಂದು ಅರ್ಚಕರ ಪತ್ನಿ ಪ್ರಶ್ನಿಸಿದ್ದರು. ಅದಕ್ಕೆ ನಾನು ಊರಿನಲ್ಲಿ ಚಿನ್ನಾಭರಣದ ಅಂಗಡಿಯನ್ನು ತೆರೆಯಲಿದ್ದೇನೆ. ಪತಿವ್ರತ ಮಹಿಳೆಯ ಮಾಂಗಲ್ಯ ಸರವನ್ನು ಸ್ಪರ್ಶಿಸಿದ ಹಣವನ್ನು ಅಂಗಡಿಯೊಳಗಿರಿಸಲು ಜೋತಿಷಿ ಸೂಚಿಸಿದ್ದಾರೆ. ಅದಕ್ಕಾಗಿ ನಿಮ್ಮ ಮಾಂಗಲ್ಯ ಸರವನ್ನು ಈ ನೋಟಿಗೆ ಸ್ಪರ್ಶಿಸಿ ನೀಡಿ ಎಂದು ಹೇಳಿದ್ದ.

ಇದನ್ನು ನಂಬಿದ ಮಹಿಳೆ ತನ್ನ ಮಾಂಗಲ್ಯವನ್ನು ಹಣಕ್ಕೆ ಸ್ಪರ್ಶಿಸಿದಾಗ, ಆ ರೀತಿಯಲ್ಲ. ಮಾಂಗಲ್ಯ ಸರವನ್ನು ಸಂಪೂರ್ಣ ತೆಗೆದು ಅದನ್ನು ನೋಟಿನಲ್ಲಿಟ್ಟು ಕೊಡಿ ಎಂದು ತಿಳಿಸಿದಾಗ ಮಹಿಳೆಯು ಅದೇ ರೀತಿ ಮಾಡಿ ನೋಟನ್ನು ಆತನ ಕೈಗೆ ನೀಡಿದ್ದರು.

ಏನಾಗುತ್ತಿದೆ ಎನ್ನುಷ್ಟರಲ್ಲಿ ಆ ವ್ಯಕ್ತಿ ಹೋಗಿಯಾಗಿತ್ತು. ಒಂದಷ್ಟು ಹೊತ್ತು ಕಳೆದ ಮೇಲೆ ವಾಸ್ತವ ಸ್ಥಿತಿಗೆ ಬಂದ ಮಹಿಳೆ ತನ್ನ ಮಾಂಗಲ್ಯ ಸರ ಕೊರಳಲ್ಲಿ ಇಲ್ಲದಿರುವುದನ್ನು ಕಂಡು ಬೊಬ್ಬೆ ಹೊಡೆದಾಗ ಅಪರಿಚಿತ ವ್ಯಕ್ತಿಯೋರ್ವ ತನಗೆ ಮಂಕುಬೂದಿ ಎರಚಿ ಮಾಂಗಲ್ಯ ಸರ ಎಗರಿಸಿರುವುದು ಬೆಳಕಿಗೆ ಬಂದಿತ್ತು.

Advertisement

ಠಾಣೆಯ ಸಮೀಪದಲ್ಲೇ ಘಟನೆ
ಪೊಲೀಸ್‌ ಠಾಣೆಗೆ ಕೂಗಳತೆಯ ದೂರದಲ್ಲಿ ನಡೆದ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳದಲ್ಲಿನ ಸಿಸಿ ಕೆಮರಾಗಳ ಆಧಾರದಲ್ಲಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದು, ವಂಚಕರನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಎಸ್ಸೆ„ ರಾಜೇಶ್‌ ಕೆ. ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next