Advertisement

Uppinangady: ಪ್ರವಾಸಿ ಮಂದಿರ ಜಾಗದಲ್ಲಿ ಬಸ್‌ ನಿಲ್ದಾಣ?

01:00 PM Jan 06, 2025 | Team Udayavani |

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಗಾಂಧಿ ಪಾರ್ಕ್‌ ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರ ಕಟ್ಟಡ ಯಾರೂ ಹೇಳುವವರು, ಕೇಳುವವರು ಇಲ್ಲದೆ ಪಾಳುಬಿದ್ದು ಹೋಗಿದೆ, ಅದರ ಪರಿಕರಗಳು, ಛಾವಣಿಗೆಲ್ಲ ಗೆದ್ದಲು ಹಿಡಿದಿದೆ.

Advertisement

ಶಿರಾಡಿ ಘಾಟಿಯಿಂದ ಇಳಿದ ಬಳಿಕ ಸಿಗುವ ಮೊದಲ ಪ್ರವಾಸಿ ಮಂದಿರ ಇದಾಗಿದ್ದು, ಹಿಂದೆ ಭಾರೀ ಜನಾಕರ್ಷಣೆ ಹೊಂದಿತ್ತು. ಮಂತ್ರಿಮಹೋದರರ ಸಹಿತ ಹತ್ತು ಹಲವು ಉನ್ನತ ಮಟ್ಟದ ಅಧಿಕಾರಿಗಳ ವಾಸದ ಕೇಂದ್ರವಾ ಗಿತ್ತು. ಈಗ ಪ್ರವಾಸೋದ್ಯಮ ಇಲಾಖೆಯಡಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಸೌಲಭ್ಯಗಳಿರುವ ಹೊಟೇಲ್‌, ವಸತಿ ಕಟ್ಟಡಗಳು ಹೆಚ್ಚಾಗಿರುವುದರಿಂದ ಪ್ರವಾಸಿ ಮಂದಿರ ಬಳಕೆ ಮಾಡದೆ ಪಾಳುಬಿದ್ದಿದೆ. ಅಚ್ಚರಿ ಎಂದರೆ, ಅತ್ಯಂತ ಪ್ರಮುಖ ಜಾಗದಲ್ಲಿರುವ ಈ ಕಟ್ಟಡವನ್ನು ಬೇರೆ ಉದ್ದೇಶಕ್ಕೂ ಬಳಕೆ ಮಾಡುತ್ತಿಲ್ಲ. ಅದರ ಸುತ್ತ ಇರುವ ಒಂದು ಎಕ್ರೆ 50 ಸೆಂಟ್ಸ್‌ ಜಾಗವನ್ನು ಬಳಸುವುದಕ್ಕೆ ಅವಕಾಶವಿದ್ದರೂ ಯಾರೂ ಅದರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ.

ಬಸ್‌ ನಿಲ್ದಾಣವಾಗಿ ಬಳಸಲು ಪ್ರಯತ್ನ
ಈ ಜಾಗ ಪುತ್ತೂರು ತಾಲೂಕು ಪಂಚಾಯತ್‌ ಅಧೀನದಲ್ಲಿದೆ. ಯಾರೂ ಬಳಕೆ ಮಾಡದ ಈ ಒಂದು ಎಕ್ರೆ 50 ಸೆಂಟ್‌ ಜಾಗವನ್ನು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು 10 ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಿದೆ. ಆದರೆ ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.

ಈಗ ಗ್ರಾಪಂ ಅಧೀನದಲ್ಲಿರುವ ಜಾಗದಿಂದ ಖಾಸಗಿ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳು ಸ್ಥಳಾಂತ ರಗೊಂಡರೆ ತಮಗೆ ನಷ್ಟವಾಗುವ ಗ್ರಹಿಕೆಯಿಂದ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಪ್ರಯತ್ನಗಳು ಇನ್ನೂ ಸಫ‌ಲವಾಗಿಲ್ಲ. ಸಂಸ್ಥೆ ಅಧಿಕಾರಿಗಳಿಗೆ ಈಗಾಗಲೇ ಬಸ್‌ ನಿಲ್ದಾಣ ಕೊರತೆ ಮನವರಿಕೆಯಾದರೂ ಸ್ವಂತ ಬಸ್‌ನಿಲ್ದಾಣದ ಗೋಜಿಗೆ ಹೋಗದೇ ತಮ್ಮ ಕರ್ತವ್ಯ ಅವಧಿ ಮುಗಿಸುವ ತರಾತುರಿಯಲ್ಲಿದ್ದಾರೆ ಎನ್ನುವುದು ಜನಾಭಿಪ್ರಾಯ.

ಪ್ರವಾಸಿ ಮಂದಿರದ ನಿವೇಶನ ಸಿಕ್ಕರೆ ಶಾಲಾ ಕಾಲೇಜುಗಳ ಐದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಅನುಕೂಲಕರವಾಗಲಿದೆ. ಕಿರಿದಾದ ಬ್ಯಾಂಕ್‌ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದಾಡಲು ಕಷ್ಟವಾಗುತ್ತಿದೆ. ಇಲ್ಲಿ ಸಾರಿಗೆ ನಿಲ್ದಾಣವಾದರೆ ಪಟ್ಟಣ ಮತ್ತಷ್ಟು ಬೆಳೆಯಲು ಸಾಧ್ಯ.
-ಸುರೇಶ ಅತ್ರಮಜಲು, ಗ್ರಾಪಂ ಹಿರಿಯ ಸದಸ್ಯ.

Advertisement

ಪಂಚಾಯತ್‌ ಬಸ್‌ ನಿಲ್ದಾಣದಲ್ಲಿ ಬಸ್ಸುಗಳ ಸಂಖ್ಯೆ ಏರಿಕೆಯಿಂದ ಸ್ಥಳಾವಕಾಶ ಕೊರತೆ ಉದ್ಭವಿಸಿದೆ. ಪ್ರವಾಸಿ ಮಂದಿರ ಅಗತ್ಯತೆ ಇಲ್ಲದೆ ಇದ್ದರೆ ಈ ಜಾಗವನ್ನು ಸಾರಿಗೆ ಸಂಸ್ಥೆಗೆ ಒದಗಿಸಲು ಸಚಿವರಲ್ಲಿ ಕೇಳಿಕೊಳ್ಳಲಾಗುವುದು.
-ಡಾ| ರಾಜರಾಮ ಕೆ.ಬಿ., ನಿಕಟಪೂರ್ವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು

ಈಗ ಇರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ರಾತ್ರಿ ವೇಳೆ ಭದ್ರತೆ ಇಲ್ಲದೆ ಪರದಾಡಬೇಕಾಗಿದೆ. ಉಪ್ಪಿನಂಡಿಗೆ ಸುಸಜ್ಜಿತ ಬಸ್‌ ನಿಲ್ದಾಣ ಬೇಕು. ಈ ನಿಟ್ಟಿನಲ್ಲಿ ಶಾಸಕರ ಮೂಲಕ ಅಧಿಕಾರಿಗಳನ್ನು ಮನವೊಲಿಸಿ ನಿಲ್ದಾಣ ನಿರ್ಮಿಸುವ ಪ್ರಯತ್ನಗಳು ನಡೆದಿವೆ.
-ಅರ್ತಿಲ ಕೃಷ್ಣರಾವ್‌, ಶ್ರೀ ಸಹಸ್ರಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರು

-ಎಂ.ಎಸ್‌. ಭಟ್‌ ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next