Advertisement

ಆಯುಷ್ಮಾನ್‌ ಭಾರತ್‌: ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಆಗ್ರಹ

03:27 PM Aug 05, 2019 | Naveen |

ಉಪ್ಪಿನಂಗಡಿ: ಬಜತ್ತೂರು ಗ್ರಾಮವನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿಸಬೇಕು ಹಾಗೂ ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ನೇರವಾಗಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಕೋರಿ ಪತ್ರ ಬರೆಯುವ ಬಗ್ಗೆ ಬಜತ್ತೂರು ಗ್ರಾಮಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

Advertisement

ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಪಂರ್ದಾಜೆ ಅವರ ಅಧ್ಯಕ್ಷತೆಯಲ್ಲಿ ಕಾಂಚನದ ವೆಂಕಟಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ಬಜತ್ತೂರು ಗ್ರಾ.ಪಂ.ನ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಗ್ರಾಮಸ್ಥರು, ಬಜತ್ತೂರು ಗ್ರಾಮವನ್ನು ನೆಲ್ಯಾಡಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿಸಲಾಗಿದೆ. ಬಜತ್ತೂರು ಗ್ರಾಮದವರಿಗೆ ಹತ್ತಿರವಿರುವುದು ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರ. ನೆಲ್ಯಾಡಿಯನ್ನು ನೂತನ ಕಡಬ ತಾಲೂಕಿಗೆ ಸೇರಿಸಲಾಗಿದೆ. ಆದ್ದರಿಂದ ಪುತ್ತೂರು ತಾಲೂಕಿನಲ್ಲಿರುವ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬಜತ್ತೂರು ಗ್ರಾಮವನ್ನು ಸೇರಿಸಬೇಕೆಂದು ಆಗ್ರಹಿಸಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ರೋಗಿ ಮೊದಲಿಗೆ ಸರಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡುತ್ತಾರೆ. ಇದರಿಂದ ಅಮೂಲ್ಯ ಸಮಯ ಹಾಳಾಗುತ್ತದೆ. ಈ ಯೋಜನೆಯಡಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಟಾರ್ಪಾಲು ನೀಡಲು ಆಗ್ರಹ
ಕೃಷಿ ಇಲಾಖೆಯಿಂದ ದೊರೆಯುವ ಟಾರ್ಪಾಲು ಪಡೆಯಲು ಒಂದು ಎಕ್ರೆ ಕೃಷಿ ಭೂಮಿ ಇರಬೇಕೆಂಬ ನಿಯಮವಿದೆ. 50 ಸೆಂಟ್ಸ್‌ನಲ್ಲೂ ಕೃಷಿ ಮಾಡುವವರು ಇದ್ದಾರೆ. ಆದ್ದರಿಂದ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು 50 ಸೆಂಟ್ಸ್‌ ನವರಿಗೂ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಪರಿಹಾರ ಸಿಕ್ಕಿಲ್ಲ
ಗ್ರಾಮೀಣ ಭಾಗಗಳಲ್ಲಿ ಸರಕಾರಿ ಬಸ್‌ಗಳ ಕೊರತೆ ಇದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸರಕಾರಿ ಬಸ್‌ಗಳ ಕೊರತೆಯನ್ನು ನೀಗಿಸಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ಕಳೆದ ಮಳೆಗಾಲದಲ್ಲಿ ಹಾನಿಗೊಂಡ ಮನೆಗಳ ಮಾಲಕರಿಗೆ ಇನ್ನೂ ಪರಿಹಾರ ದೊರಕಿಲ್ಲ. ಇದನ್ನು ಶೀಘ್ರ ನೀಡಬೇಕು ಹಾಗೂ ಅಂತ್ಯಸಂಸ್ಕಾರ ಯೋಜನೆಯಡಿ ನೀಡುವ ಅನುದಾನವೂ ವಿಳಂಬವಾಗಿ ಸಿಗುತ್ತಿದೆ. ಇವುಗಳನ್ನು ತತ್‌ಕ್ಷಣಕ್ಕೆ ಸಿಗುವಂತೆ ಮಾಡಬೇಕೆಂಬ ಒತ್ತಾಯ ಕೇಳಿಬಂತು. ಈ ಬಗ್ಗೆ ಕೋರಿ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.

Advertisement

ಮರಳು ಕೊಡಿ
ಮರಳು ನೀತಿಯನ್ನು ಸರಳಗೊಳಿಸುವ ಮೂಲಕ ಎಲ್ಲರಿಗೂ ಕಡಿಮೆ ದರದಲ್ಲಿ ಮರಳು ಲಭ್ಯವಾಗುವಂತೆ ಮಾಡಬೇಕು. ಅಗತ್ಯವಿರುವಲ್ಲಿ ವಿದ್ಯುತ್‌ನ ಎಚ್.ಟಿ. ಲೈನ್‌ಗಳಿಗೆ ಗಾರ್ಡಿಂಗ್‌ ಅಳವಡಿಸಬೇಕು. ಹೆಚ್ಚು ಉದ್ದದ ವಿದ್ಯುತ್‌ ಲೈನ್‌ಗಳಿದ್ದು, ಮದ್ಯದಲ್ಲಿ ಕಂಬಗಳಿಲ್ಲದೆ ವಿದ್ಯುತ್‌ ತಂತಿಗಳು ಜೋತಾಡುತ್ತಿವೆ. ಇಂತಹ ಕಡೆ ವಿದ್ಯುತ್‌ ಕಂಬಗಳನ್ನು ಅಳವಡಿಸಬೇಕೆಂಬ ಆಗ್ರಹ ಸಭೆಯಲ್ಲಿ ಪ್ರಸ್ತಾವವಾಯಿತು.

ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು, ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ಪ್ರಸಿಲ್ಲಾ ಡಿ’ಸೋಜಾ, ರಾಜೇಶ್‌ ಕುಮಾರ್‌, ತೇಜಕುಮಾರಿ, ಲೀಲಾವತಿ, ನವೀನ, ಶಶಿತಾ, ಆನಂದ ಕೆ.ಎಸ್‌., ಮಾಧವ ಪೂಜಾರಿ, ಕಮಲಾಕ್ಷಿ, ಗಣೇಶ್‌ ಕೆ., ಚಂಪಾ ಉಪಸ್ಥಿತರಿದ್ದರು.

ನೋಡಲ್ ಅಧಿಕಾರಿಯಾಗಿದ್ದ ಪಶು ಸಂಗೋಪನ ಇಲಾಖೆಯ ಪಶು ವೈದ್ಯಾಧಿಕಾರಿ ಡಾ| ರಾಮ್‌ ಪ್ರಕಾಶ್‌ ಸಭೆ ನಿರ್ವಹಿಸಿದರು. ವಿವಿಧ ಇಲಾಖಾಧಿಕಾರಿಗಳಾದ ಹರಿಣಾಕ್ಷಿ, ಸವಿತಾ ಕೆ., ಪುಷ್ಪವಲ್ಲಿ, ಅಣ್ಣಮ್ಮ, ಸಂದೀಪ್‌, ಸುನೀಲ್, ಕೆ. ರಾಜೇಶ್‌, ಗಣೇಶ್‌, ವಿರೂಪಾಕ್ಷ, ಸಂಗಯ್ಯ ಕಾಳೆ ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರಾದ ಗಣೇಶ್‌ ಕುಲಾಲ್, ಗೋಪಾಲಕೃಷ್ಣ ಪೊರೋಳಿ, ವಸಂತ ಗೌಡ ಪಿಜಕ್ಕಳ ಚರ್ಚೆಯಲ್ಲಿ ಭಾಗವಹಿಸಿದ್ದರು.

ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ ಸ್ವಾಗತಿಸಿ, ವಂದಿಸಿದರು. ಸಿಬಂದಿ ಮಮತಾ, ರಮೇಶ್‌, ಮುಹಮ್ಮದ್‌ ಮುಂತಾದವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next