ಉಪ್ಪಿನಂಗಡಿ: ಇಲ್ಲಿನ ಶಾಲೆ ರಸ್ತೆಯಲ್ಲಿರುವ “ವಿವಾ ಫ್ಯಾಶನ್” ಹೆಸರಿನ ಜವುಳಿ ವ್ಯಾಪಾರ ಮಳಿಗೆಯಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿ ಸಂಭವಿಸಿದೆ.
ಕಟ್ಟಡದ ಮೊದಲ ಮಹಡಿ ಹಾಗೂ ಎರಡನೇ ಮಹಡಿ ಸಂಪೂರ್ಣವಾಗಿ ವಿವಾ ಫ್ಯಾಶನ್‌ಗೆ ಸೇರಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿರುವ ಮಳಿಗೆಯಲ್ಲಿ ಬಟ್ಟೆ ಬರೆ, ಫೂಟ್‌ವೇರ್, ಮಕ್ಕಳ ಆಟಿಕೆ ಹಾಗೂ ಬ್ಯಾಗ್‌ಗಳ ಬೃಹತ್ ಸಂಗ್ರಹವಿತ್ತು.
ಮುಂಜಾನೆ 6.30ರ ಸುಮಾರಿಗೆ ಮೊದಲ ಮಹಡಿಯಿಂದ ಹೊಗೆ ಬರುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದರು. ಹವಾನಿಯಂತ್ರಿತ ವ್ಯವಸ್ಥೆಗಾಗಿ ಸಂಪೂರ್ಣ ಗಾಜಿನಿಂದಾವೃತವಾಗಿದ್ದ ಕಾರಣ ಬೆಂಕಿ ಸಂಪೂರ್ಣವಾಗಿ ವ್ಯಾಪಿಸಿದ ಬಳಿಕವಷ್ಟೇ ಹೊಗೆ ಹೊರಭಾಗಕ್ಕೆ ಪಸರಿಸಿದ ಕಾರಣ ಆ ವೇಳೆಗಾಗಲೇ ಮೊದಲ ಮಹಡಿಯಲ್ಲಿದ್ದ ಬಟ್ಟೆ ಬರೆಗಳೆಲ್ಲವೂ ಬೆಂಕಿಗಾಹುತಿಯಾಗಿದ್ದವು.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಲು ಯಶಸ್ವಿಯಾದರೂ ಆ ವೇಳೆಗಾಗಲೇ ಬಹುತೇಕ ಬಟ್ಟೆಬರೆ ಹಾನಿಗೀಡಾಗಿದ್ದವು. ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸರು ಮತ್ತು ಮೂರು ಅಗ್ನಿಶಾಮಕ ತಂಡಗಳು ಭಾಗಿಯಾಗಿದ್ದವು.