Advertisement

ಉಪ್ಪಿನಂಗಡಿ ಪ್ರಕರಣ: 10 ಮಂದಿ ಸೆರೆ

12:25 AM Dec 17, 2021 | Team Udayavani |

ಉಪ್ಪಿನಂಗಡಿ: ಸಾರ್ವಜನಿಕ ಶಾಂತಿ ಭಂಗ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕೋವಿಡ್‌ ನಿಯಮಾವಳಿ ಉಲ್ಲಂಘನೆ, ಕೊಲೆಯತ್ನ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಒಂದು ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸ ಬೇಕೆಂದು ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆಯ ಸಂದರ್ಭ ಅಹಿತಕರ ಘಟನೆ ನಡೆದಿತ್ತು.

ಬಂಧಿತರು:

ಮಹಮ್ಮದ್‌ ತಾಹಿರ್‌, ಸ್ವಾದಿಕ್‌, ಅಬ್ದುಲ್‌ ಮುಬಾರಕ್‌, ಅಬ್ದುಲ್‌ ಶರೀನ್‌, ಮಹಮ್ಮದ್‌ ಜಾಹಿರ್‌, ಸುಜೀರ್‌ ಮಹಮ್ಮದ್‌ ಫೈಝಲ್‌, ಮಹಮ್ಮದ್‌ ಹನೀಫ್, ಎನ್‌. ಖಾಸಿಂ, ಮಹಮ್ಮದ್‌ ಆಸಿಫ್, ತುಫೈಲ್‌ ಮಹಮ್ಮದ್‌ ಬಂಧಿತರು.

ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ:

Advertisement

ಇಳಂತಿಲ ಗ್ರಾಮದ ಅಂಡೆತಡ್ಕ ಹಾಗೂ ಉಪ್ಪಿನಂಗಡಿಯ ಹಳೇಗೇಟು ಸಮೀಪ ಎರಡು ತಲವಾರು ಹಲ್ಲೆ ಪ್ರಕರಣಗಳಲ್ಲಿ  ನೈಜ ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರು ಸಾರ್ವಜನಿಕರಲ್ಲಿ ನಂಬಿಕೆ ಉಳಿಸಿಕೊಳ್ಳಬೇಕೆಂದು  ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆಂಪಿ ಮುಸ್ತಪಾ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ಅವರನ್ನು ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡವರನ್ನು ಪತ್ತೆಹಚ್ಚದೆ  ಸಂಘಟನೆಯ ಪ್ರಮುಖರೆಂಬ ಕಾರಣಕ್ಕೆ ವಶಕ್ಕೆ ಪಡೆ ಯುತ್ತಿರುವುದು ಅಶಾಂತಿಗೆ ಮೂಲ ಕಾರಣ ವಾಗಿದೆ. ಒಟ್ಟು ಪ್ರಕರಣದ ಬಗ್ಗೆ  ಸೂಕ್ತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.

ಡಿ. 14ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬೆಳಗ್ಗಿನಿಂದಲೇ ಠಾಣೆ ಬಳಿ ಜನ ಜಮಾವಣೆಗೆ ಅವಕಾಶ ನೀಡದೆ ಪ್ರಮುಖರನ್ನು ಕರೆದು ಬಂಧಿಸಿದ ವ್ಯಕ್ತಿಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದರೆ ಈ ಗೊಂದಲ ಮೂಡುತ್ತಿರಲಿಲ್ಲ ಎಂದಿದ್ದಾರೆ.

ಎರಡೂ ಪ್ರಕರಣಗಳ ಕೂಲಂಕಷ ತನಿಖೆ ನಡೆಸಿ ಪರಿಶೀಲಿಸುವುದಾಗಿ ಎಸ್‌ಪಿ ಭರವಸೆ ನೀಡಿದ್ದಾರೆ. ಪ್ರಮುಖರಾದ ಸುಕೂರು ಹಾಜಿ, ನಜೀರ್‌ ಮಠ, ಅನೀಫ್ ಕೆನರ ಮೊದಲಾದವರು ನಿಯೋಗದಲ್ಲಿದ್ದರು.

ಖಂಡನೀಯ: ಸುದರ್ಶನ್‌:

ಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆ ಪಿಎಫ್ಐ ಕಾರ್ಯಕರ್ತರು ನಡೆಸಿದ ಹಲ್ಲೆ ಖಂಡನೀಯವಾಗಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ. ಕರಾವಳಿಯ ಶಾಸಕರು ಈ ವಿಚಾರವನ್ನು ಅಧಿವೇಶನ ವೇಳೆ ಬೆಳಗಾವಿಯಲ್ಲಿ ಗೃಹ ಸಚಿವರ ಗಮನಕ್ಕೆ ತಂದು ಕಠಿನ ಕ್ರಮಕ್ಕೆ ಆಗ್ರಹಿಸಿದ್ದಾರೆ. ಡಿ. 17ರಂದು ಪಿಎಫ್‌ಐ ಹಮ್ಮಿಕೊಂಡಿರುವ ಮಂಗಳೂರು ಎಸ್‌ಪಿ ಕಚೇರಿ ಚಲೋಗೆ ಅವಕಾಶ ನೀಡಬಾರದು ಎಂದಿದ್ದಾರೆ.

 

ಠಾಣೆಗೆ ನುಗ್ಗಲು ಯತ್ನಿಸಿದ್ದರು  :

ಮಂಗಳವಾರ ನಡೆದ ಘಟನೆಯ ಕುರಿತು ಉಪ್ಪಿನಂಗಡಿ ಠಾಣೆಯ ಉಪ ನಿರೀಕ್ಷಕರಾದ ಓಮನ ಎನ್‌.ಕೆ. ಅವರು ದೂರು ನೀಡಿದ್ದಾರೆ. ಸಂಘ ಟನೆಯ ಮುಖಂಡರಾದ ಝಕಾರಿಯ, ಮುಸ್ತಾಫ‌ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಆರೋಪಿತರು ಏಕಾಏಕಿಯಾಗಿ ಪೊಲೀಸ್‌ ಠಾಣೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಶಾಂತಿಭಂಗಕ್ಕೆ ಕಾರಣರಾಗಿದ್ದರು. ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿತ್ತು. ಸಂಜೆ 6ರ ಸುಮಾರಿಗೆ ಆರೋಪಿಗಳು ಠಾಣೆಗೆ ನುಗ್ಗಲು ಪ್ರಯತ್ನಿಸಿದ್ದು, ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಯನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ, ಮಾಸ್ಕ್ ಧರಿಸದೆ ಸರಕಾರದ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂ ಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕೊಲೆ ಯತ್ನ, ಮಾನಭಂಗ ಯತ್ನ:

ಓಮನ ಅವರ ಎರಡನೇ ದೂರಿನಲ್ಲಿ, 144 ಸೆಕ್ಷನ್‌ ಜಾರಿಯಲ್ಲಿದ್ದರೂ ಠಾಣೆಯ ಎದುರು ಜಮಾಯಿಸಿದ್ದ ಗುಂಪು ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ನನ್ನ ಮೇಲೆ ಹಲ್ಲೆ ನಡೆಸಿ, ಸಮವಸ್ತ್ರವನ್ನು ಹರಿದು ಹಾಕಿ ಮಾನಭಂಗ, ಕೊಲೆಯತ್ನ ನಡೆಸಿದ್ದಾರೆ. ನನ್ನ ಜತೆ ಕರ್ತವ್ಯದಲ್ಲಿದ್ದ ರೇಣುಕಾ ಹಾಗೂ ಇತರ ಪೊಲೀಸರಿಗೆ, ಅವರ ಮೇಲಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮಾರಕಾಯುಧಗಳಿಂದ ದಾಳಿ :

ಮಂಗಳವಾರದ ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ಉಪನಿರೀಕ್ಷಕ ಪ್ರಸನ್ನ ಕುಮಾರ್‌ ಅವರು ಕೂಡ ದೂರು ನೀಡಿದ್ದಾರೆ.

ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿದ್ದ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ, ಠಾಣೆಯೊಳಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತು ರಾತ್ರಿ 9.30ರ ಸುಮಾರಿಗೆ ಅವರನ್ನು ಚದುರಿಸಲು ನಾನು ಮತ್ತು ಸಿಬಂದಿ ತೆರಳಿದಾಗ ಪ್ರತಿಭಟನಕಾರರು ಮಾರಕಾಯುಧಗಳಾದ ಸೋಡಾ ಬಾಟಿÉಗಳನ್ನು ಆ್ಯಂಬುಲೆನ್ಸ್‌ ವಾಹನದಿಂದ ತೆಗೆದು ದಾಳಿ ನಡೆಸಿದ್ದರು. ಓರ್ವ ವ್ಯಕ್ತಿ ಚೂರಿಯಿಂದ ನನ್ನ ಹೊಟ್ಟೆಗೆ ತಿವಿಯಲು ಬಂದಿದ್ದು, ತಡೆದಿದ್ದರಿಂದ ನನ್ನ ಅಂಗೈಗೆ ಗಾಯವಾಗಿದೆ. ಡಿವೈಎಸ್ಪಿಯವರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಗುಂಪು ಸೇರಿದ್ದ ಜನರು ಸ್ಥಳದಿಂದ ಓಡಿಹೋಗಿ ಕಾಂಪೌಂಡ್‌ ಗೋಡೆ ಹಾರಿ ಮಸೀದಿಯೊಳಗೆ ಹೋಗಿರುವುದಲ್ಲದೆ, ಪೊಲೀಸರ ಮೇಲೆ ಕಲ್ಲು, ಸೋಡಾ ಬಾಟಿÉಗಳನ್ನು ತೂರಿದ್ದಾರೆ. ಪೊಲೀಸ್‌ ವಾಹನಕ್ಕೆ, ಇಲಾಖಾ ಸೊತ್ತಿಗೆ ಹಾನಿಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಮಾದ ಮುಚ್ಚಿ ಹಾಕಲು ಪೊಲೀಸರಿಂದ ಕಟ್ಟುಕಥೆ: ಪಿಎಫ್ಐ ಆರೋಪ :

ಮಂಗಳೂರು, ಡಿ. 16: ಉಪ್ಪಿನಂಗಡಿಯ ಪ್ರತಿಭಟನೆ ಕುರಿತಂತೆ ಪೊಲೀಸರು ತಮ್ಮ ಪ್ರಮಾದವನ್ನು ಮರೆ ಮಾಚಲು ಕಟ್ಟುಕಥೆ ಸೃಷ್ಟಿಸುತ್ತಿದ್ದಾರೆ ಎಂದು ಪಿಎಫ್ಐ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.

ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಮತ್ತು ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ. 14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಹಲ್ಲೆ, ಠಾಣೆಯ ಮೇಲೆ ಕಲ್ಲೆಸೆತ, ಗಲಭೆಗೆ ಪಿತೂರಿ, ಪೊಲೀಸ್‌ ಜೀಪ್‌ಗೆ ಹಾನಿ ಇತ್ಯಾದಿ ಆರೋಪಗಳೆಲ್ಲವೂ ಸುಳ್ಳು. ಲಾಠೀ ಪ್ರಹಾರ ನಡೆಸಿದ ಬಳಿಕವೂ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಸನ್ನ ಕುಮಾರ್‌ ಠಾಣೆಯ ಮುಂದೆಯೇ ಇದ್ದರು. ಆವಾಗ ಅವರ ಕೈಯಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ. ಅನಂತರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಈ ಆರೋಪಗಳು ಕೇಳಿ ಬಂದಿವೆ. ಬಳಿಕ ದಾಖಲಿಸಲಾದ

ಎಫ್ಐಆರ್‌ಗಳಲ್ಲಿ ಒಂದೊಂದೇ ಆರೋಪಗಳನ್ನು ಸೇರಿಸಲಾಯಿತು ಎಂದರು.

ಈಗಾಗಲೇ ಪೊಲೀಸ್‌ ಠಾಣೆ ಮತ್ತು ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಹಾರ್ಡ್‌ ಡಿಸ್ಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರತಿಭಟನಕಾರರು ದಾಳಿ ನಡೆಸುವ ದೃಶ್ಯಗಳಿದ್ದರೆ ಬಹಿರಂಗಪಡಿಸಲಿ ಎಂದರು.

ಪಿಎಫ್ಐ ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಖಾದರ್‌ ಕುಳಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next