ಉಪ್ಪಿನಂಗಡಿ: ಇಲ್ಲಿನ ಬ್ಯಾಂಕ್ ರಸ್ತೆಯಲ್ಲಿನ 7 ಅಂಗಡಿಗಳಿಗೆ ಶನಿವಾರ ರಾತ್ರಿ ವೇಳೆ ನುಗ್ಗಿ ಹಲವಾರು ವಸ್ತುಗಳನ್ನು ಕಳ್ಳತನಗೈದ ಘಟನೆ ನಡೆದಿದೆ.
ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿಯ ಚಿನ್ನ – ಬೆಳ್ಳಿ ಆಭರಣದ ಅಂಗಡಿಯ ಮಾಡಿನ ಹೆಂಚು ತೆಗೆದು ಒಳ ನುಗ್ಗಿದ ಕಳ್ಳ ಚಿನ್ನಾಭರಣದ ತಿಜೋರಿಯ ಬಾಗಿಲು ತೆರೆಯಲು ವಿಫಲವಾಗಿ, ಚಿಲ್ಲರೆ ಮೊತ್ತವನ್ನು ಎಗರಿಸಿದ್ದಾನೆ. ಸನಿಹದ ಮೆಡಿಕಲ್ ಶಾಪಿನ ಹೆಂಚು ತೆಗೆದು ಒಳ ನುಗ್ಗಿದ ಕಳ್ಳ, ಅಂಗಡಿ ಯೊಳಗಿದ್ದ ಮೊಬೈಲ್‌ವೊಂದನ್ನು ಕದ್ದೊಯ್ದಿದ್ದು, ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ. ಅದೇ ಕಟ್ಟಡದ ಜವುಳಿ ಅಂಗಡಿಗೂ ಮಾಡಿನ ಹೆಂಚು ತೆಗೆದು ನುಗ್ಗಿದ ಸ್ನಾನಕ್ಕೆ ಬಳಸುವ 2 ಟೆವೆಲ್ ಕದ್ದೊಯ್ದಿದ್ದಾನೆ.
ಇದೇ ರಸ್ತೆಯ ಕೆನರಾ ಬ್ಯಾಂಕ್ ಸನಿಹದ ಹೊಟೇಲ್, ಫರ್ನಿಚರ್ ಅಂಗಡಿ, ಜನರಲ್ ಸ್ಟೋರ್, ದಿನಸಿ ಅಂಗಡಿ ಕಟ್ಟಡಗಳಿಗೂ ಒಳ ನುಗ್ಗಿದ ಕಳ್ಳ ಅಲ್ಲಿಂದಲೂ ಕೈಗೆ ದೊರೆತ ವಸ್ತುಗಳನ್ನೆಲ್ಲ ಎಗರಿಸಿದ್ದಾನೆ. ಫನಿರ್ಚರ್ ಅಂಗಡಿಯೊಳಗಿದ್ದ ಬೆಲೆ ಬಾಳುವ ವಾಚೊಂದನ್ನು ಕದ್ದೊಯ್ದಿದ್ದು, ಎಲ್ಲೆಡೆ ಅಂಗಡಿಯ ಮಾಡಿನಿಂದಲೇ ಕಳ್ಳ ಒಳಪ್ರವೆಶಿಸಿದ ನಡೆ ವ್ಯಕ್ತವಾಗಿದೆ. ಈ 7 ಪ್ರಕರಣಗಳಿಗೂ ಸಾಮ್ಯತೆ ಇದ್ದು, ಓರ್ವನೇ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಸಿ ಕೆಮರಾದಲ್ಲಿ ಕಳ್ಳನ ಭಾವ ಚಿತ್ರ ಸ್ಪಷ್ಟವಾಗಿ ಸೆರೆಯಾಗಿದ್ದು, ಪ್ರತಿಯೊಂದು ಅಂಗಡಿಯೊಳಕ್ಕೆ ನುಗ್ಗಿದಾಕ್ಷಣದಲ್ಲೇ ಕಳ್ಳ ಸಿಸಿ ಕೆಮ ರಾದ ದಿಕ್ಕು ಬದಲಾಯಿಸುವ ಪ್ರಯತ್ನ ಮಾಡಿದ್ದು, ಆ ವೇಳೆ ಆತನ ಮುಖ ಕೆಮರಾದಲ್ಲಿ ಸೆರೆಯಾಗಿದೆ.
ಉಪ್ಪಿನಂಗಡಿ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.