Advertisement

5 ಲೀ. ಹಾಲಿನಿಂದ ಸಾವಿರ ಲೀ. ಹಾಲು ಸಂಗ್ರಹದ ಯಶೋಗಾಥೆ

09:37 PM Feb 09, 2020 | Sriram |

ಗರಿಷ್ಠ ಹಾಲು ಸಂಗ್ರಹಣೆ ಮಾಡುತ್ತಿರುವ ಉಪ್ಪಿನಕುದ್ರು ಹಾಲು ಉತ್ಪಾದಕರ ಸಂಘ, ದೇಸೀ ತಳಿಯ ಹಸು ಸಾಕಾಣಿಕೆಗೂ ಪ್ರೇರಣೆ ನೀಡಿದೆ. ಇದರೊಂದಿಗೆ ಹೈನುಗಾರರ ಬದುಕು ಹಸನಾಗಿಸುವ ಸಮಾಜಮುಖೀ ಸೇವೆಯನ್ನೂ ಮಾಡುತ್ತಿದೆ.

Advertisement

ತಲ್ಲೂರು: ಉಪ್ಪಿನಕುದ್ರು ಭಾಗದ ಹೈನುಗಾರರಿಗೆ 4-5 ಕಿ.ಮೀ. ದೂರದ ಕುಂದಾಪುರಕ್ಕೆ ದೋಣಿಯ ಮೂಲಕ ಹಾಲು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಮನಗಂಡು ಉಪ್ಪಿನಕುದ್ರುವಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಆರಂಭಗೊಂಡಿತು.

ಕೇವಲ 5-10 ಲೀಟರ್‌ ಹಾಲು ಸಂಗ್ರಹದಿಂದ ಸ್ಥಾಪನೆಗೊಂಡ ಈ ಸಂಘವು ಈಗ ದಿನಕ್ಕೆ ಸರಾಸರಿ 800 ಲೀ. ಹಾಲು ಸಂಗ್ರಹವಾಗುವ ಮಟ್ಟಿಗೆ ಬೆಳೆದಿದೆ. 900 ಲೀ. ನಿಂದ 1 ಸಾವಿರ ಲೀ. ಹಾಲು ಸಂಗ್ರಹ ಕೂಡ ಕೆಲ ವರ್ಷಗಳ ಹಿಂದೆ ಆಗಿತ್ತು. ಆರಂಭದಲ್ಲಿ ಇಲ್ಲಿ 50-60 ಸದಸ್ಯರಿದ್ದರೂ, ಆಗ ಕೆಲವೇ ಕೆಲವು ಮಂದಿ ಮಾತ್ರ ಹೈನುಗಾರರು ಹಾಲು ಹಾಕುತ್ತಿದ್ದರು.

1987 ರ ಮಾರ್ಚ್‌ 6 ರಂದು ದಿ| ಯಜ್ಞ ಐತಾಳ್‌ ಅವರ ಮುಂದಾಳತ್ವದಲ್ಲಿ ಈ ಉಪ್ಪಿನಕುದ್ರುವಿನ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಾರಂಭಗೊಂಡಿತು. ಬಳಿಕ 1997 ರ ಫೆ. 3 ರಂದು ಉಪ್ಪಿನಕುದ್ರು ಶಾಲೆ ಹತ್ತಿರ ಬೇಡರಕೊಟ್ಟಿಗೆ ಹೋಗುವ ರಸ್ತೆಯ ಸಮೀಪ ಹೊಸದಾದ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.

ಹಿನ್ನೆಲೆ
ಹೈನುಗಾರರಿದ್ದರೂ ಕುಂದಾಪುರಕ್ಕೆ ದೋಣಿ ಮೂಲಕ ಹೋಗಬೇಕಾದ ಅನಿವಾರ್ಯ. ಈಗಿರುವ ತಲ್ಲೂರು – ಉಪ್ಪಿನಕುದ್ರು ರಸ್ತೆ ಆಗ ಕಿರು ದಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಾಲಿನ ಸಂಘ 1987 ರಲ್ಲಿ ಆರಂಭಗೊಂಡಿತು. ಇದರಿಂದ ಈ ಭಾಗದ ಅನೇಕ ಮಂದಿ ರೈತರಿಗೆ ಹಸು ಸಾಕಲು, ಸಂಘಕ್ಕೆ ಹಾಲು ಹಾಕಿ, ಅದರಿಂದ ಸಂಪಾದನೆ ಮಾಡಿ, ಸದಸ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕೆ ಸಂಘ ಪ್ರೇರಣೆಯಾಯಿತು.

Advertisement

ಪ್ರಸ್ತುತ ಸ್ಥಿತಿಗತಿ
ಸದ್ಯ ಸಂಘದಲ್ಲಿ 392 ಸದಸ್ಯರಿದ್ದು, ಇದರಲ್ಲಿ 175 ಮಂದಿ ಪ್ರತಿದಿನ ಹಾಲು ಹಾಕುವವರಿದ್ದಾರೆ. ಇದರ ವ್ಯಾಪ್ತಿಯಲ್ಲಿ 500 ಕ್ಕೂ ಮಿಕ್ಕಿ ಜಾನುವಾರುಗಳಿವೆ. ಪ್ರಸ್ತುತ ಗೋಪಾಲ ಸೇರುಗಾರ್‌ ಅಧ್ಯಕ್ಷರಾಗಿದ್ದು, ಯು. ಚಂದ್ರ ಅವರು ಉಪಾಧ್ಯಕ್ಷರಾಗಿದ್ದಾರೆ. ಮಂಜುನಾಥ್‌ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘದಿಂದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೈನುಗಾರರಿಗೆ ಪೂರಕ ಮಾಹಿತಿ ನೀಡಲಾಗುತ್ತಿದೆ.

ಅನ್ಯ ತಳಿ ರಾಸು
ಉಪ್ಪಿನಕುದ್ರು ಭಾಗದ ಹೈನುಗಾರರು ಆರಂಭದಲ್ಲಿ ಸ್ಥಳೀಯ ದೇಸೀಯ ತಳಿಯ ಜಾನುವಾರುಗಳನ್ನಷ್ಟೇ ಸಾಕುತ್ತಿದ್ದರು. ಕೆಲ ವರ್ಷಗಳಿಂದೀಚೆಗೆ ಉತ್ತಮ ಹಾಲು ಕೊಡುವ ಗುಜರಾತ್‌ನ ಗಿರ್‌, ಕೆಂಪು ಸಿಂಧಿ, ಓಂಗೋಲ್‌, ಸಾಹಿವಾಲ್‌, ಇತ್ಯಾದಿ ದೇಸಿ ತಳಿಯ ರಾಸುಗಳನ್ನು ಸಾಕುತ್ತಿದ್ದಾರೆ. ಇದಕ್ಕೆ ಈ ಸಂಘದ ಹಿಂದಿನ ಕಾರ್ಯದರ್ಶಿಯಾಗಿದ್ದ ಗಣೇಶ್‌ ಐತಾಳ್‌ ಕಾರಣರು.

ಪ್ರಶಸ್ತಿ
ಉಪ್ಪಿನಕುದ್ರು ಸಂಘದಿಂದ ಕಾರ್ಯದರ್ಶಿಯಾಗಿದ್ದ ಗಣೇಶ್‌ ಐತಾಳ್‌ ಅವರಿಗೆ 2012-13 ನೇ ಸಾಲಿನ ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿಯನ್ನು ಅವಿಭಜಿತ ದ.ಕ. ಹಾಲು ಉತ್ಪಾದಕರ ಒಕ್ಕೂಟವು ನೀಡಿ ಗೌರವಿಸಿತ್ತು. ಇದಲ್ಲದೆ 2007 ರಲ್ಲಿ ಇವರು ಒಂದೇ ತಿಂಗಳಲ್ಲಿ ಗರಿಷ್ಠ 267 ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿದ ದಾಖಲೆ ನಿರ್ಮಿಸಿದ್ದು, ಒಕ್ಕೂಟ ಇವರಿಗೆ ಅಭಿನಂದನೆ ಸಲ್ಲಿಸಿತ್ತು.

30-33 ವರ್ಷಗಳ ಹಿಂದೆ ಆರಂಭಗೊಂಡ ಈ ಉಪ್ಪಿನಕುದ್ರುವಿನ ಸಂಘವು ಈ ಭಾಗ ಅನೇಕ ಮಂದಿ ಹೈನುಗಾರರ ಬದುಕು ಕಟ್ಟಿಕೊಟ್ಟಿದೆ. ಹಾಲು ಮಾರಿಯೇ ಜೀವನ ಸಾಗಿಸುತ್ತಿರುವವರು ಅನೇಕ ಮಂದಿಯಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಜೀವನಕ್ಕೆ ಸೇರಿದಂತೆ ಎಲ್ಲ ರೀತಿಯಿಂದಲೂ ನಮಗೆ ವರದಾನವಾಗಿದೆ.
– ಗೋಪಾಲಕೃಷ್ಣ ಸೇರುಗಾರ್‌, ಅಧ್ಯಕ್ಷರು

ಅಧ್ಯಕ್ಷರು
ದಿ| ಯಜ್ಞ ಐತಾಳ್‌, ದಿ| ವೆಂಕಟರಮಣ ಉಡುಪ, ದಿ| ಮಂಜುನಾಥ ಕಾರಂತ, ದಿ| ಕೃಷ್ಣ ಕಾರಂತ, ರಮಾದೇವಿ, ರಘುರಾಮ ಆಚಾರ್‌, ಫೆಲಿಪ್ಸ್‌ ಡಿ’ಸಿಲ್ವ, ಗೋಪಾಲ್‌ ಸೇರುಗಾರ್‌.

ಕಾರ್ಯದರ್ಶಿಗಳು
ಮಧುಸೂದನ್‌ ಐತಾಳ್‌, ಗಣೇಶ್‌ ಐತಾಳ್‌,ಮಂಜುನಾಥ್‌

ಗರಿಷ್ಠ ಸಾಧಕರು: ದಿನಕ್ಕೆ 45 – 50 ಲೀ. ಹಾಲು ಹಾಕುತ್ತಿರುವ ಯು. ಚಂದ್ರ ಅವರು ಗರಿಷ್ಠ ಸಾಧಕರಾಗಿದ್ದಾರೆ.

  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next