Advertisement

ಉಪ್ಪಿನಂಗಡಿ: ಪ್ರವಾಹ ಸ್ಥಿತಿ ಎದುರಿಸಲು ರಕ್ಷಣಾ ತಂಡ ಸನ್ನದ್ಧ

12:16 AM Aug 07, 2019 | Team Udayavani |

ಉಪ್ಪಿನಂಗಡಿ: ಮುಂದಿನ ಎರಡು ದಿನ ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಆದರೆ ಈ ಬಗ್ಗೆ ಜನತೆ ಭಯಭೀತರಾಗುವ ಅಗತ್ಯವಿಲ್ಲ. ತುರ್ತು ನೆರವಿಗೆ ಪ್ರವಾಹ ರಕ್ಷಣಾ ತಂಡ ಸನ್ನದ್ಧವಾಗಿದೆ ಎಂದು ಸಹಾಯಕ ಆಯುಕ್ತ ಡಾ| ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದರು.

Advertisement

ನೇತ್ರಾವತಿ- ಕುಮಾರಧಾರಾ ನದಿಗಳ ಪ್ರವಾಹದ ಸ್ಥಿತಿಗತಿಯನ್ನು ವೀಕ್ಷಿಸಿ, ಪ್ರವಾಹ, ಪ್ರಾಕೃತಿಕ ವಿಕೋಪ ನಡೆದಾಗ ಕಾರ್ಯಾಚರಣೆಗೆ ತಂಡಗಳು ಸಿದ್ಧವಿವೆ. ತಹಶೀಲ್ದಾರ್‌, ತಾ.ಪಂ. ಇಒ ಗ್ರೇಡ್‌ನ‌ ಅಧಿಕಾರಿಗಳನ್ನು ನೆರೆ ಬಾಧಿತ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸ ಲಾಗಿದೆ. ಉಪ್ಪಿನಂಗಡಿಯಲ್ಲಿ ಪ್ರವಾಹ ರಕ್ಷಣಾ ತಂಡವಿದ್ದು, ಗೃಹರಕ್ಷಕ ದಳದ ಇಬ್ಬರು, ಕಂದಾಯ ಇಲಾಖೆಯ ಮೂವರು ಸಹಿತ ಒಟ್ಟು ಐವರು ನುರಿತ ಈಜುಗಾರರನ್ನು ನೇಮಿಸಲಾಗಿದೆ. ಎರಡು ದೋಣಿಗಳೊಂದಿಗೆ ರಕ್ಷಣಾ ಪರಿಕರಗಳನ್ನು ನೀಡಲಾಗಿದೆ ಎಂದರು.

ದ.ಕ.ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಪುತ್ತೂರು ತಹಶೀಲ್ದಾರ್‌ ಅನಂತಶಂಕರ್‌, ತಾ.ಪಂ. ಇಒ, ನೆರೆ ನಿರ್ವಹಣೆ ನೋಡಲ್ ಅಧಿಕಾರಿ ನವೀನ್‌ ಭಂಡಾರಿ, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಜಯವಿಕ್ರಮ್‌, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಇಒ ಹರಿಶ್ಚಂದ್ರ, ಗ್ರಾಮ ಸಹಾಯಕ ಯತೀಶ್‌, ಉಪ್ಪಿನಂಗಡಿ ಗ್ರಾ.ಪಂ. ಸಿಬಂದಿ ಮಹಾಲಿಂಗ, ಇಕ್ಬಾಲ್, ಇಸಾಕ್‌ ಉಪಸ್ಥಿತರಿದ್ದರು.

ಕಂಟ್ರೋಲ್ ರೂಮ್‌ ಸಂಪರ್ಕಿಸಲು ಸೂಚನೆ
ಅಧಿಕಾರಿಗಳನ್ನು ಕೇಂದ್ರ ಕಚೇರಿಯಲ್ಲೇ ಮೊಕ್ಕಾಂ ಇರಲು ಹಾಗೂ 24 ಗಂಟೆಯೂ ಮೊಬೈಲ್ ಸಂಪರ್ಕಕ್ಕೆ ಸಿಗುವಂತೆ ಸೂಚಿಸಲಾಗಿದೆ. ಅವಶ್ಯ ಬಿದ್ದಲ್ಲಿ ತತ್‌ಕ್ಷಣವೇ ಗಂಜಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ ದಳವನ್ನೂ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇದು ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ. ಸಾರ್ವಜನಿಕರು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08251230349 ಸಂಪರ್ಕಿಸಬಹುದು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಅಲರ್ಟ್‌ ಆಗಿದ್ದು, ಜಿಲ್ಲಾಧಿಕಾರಿಯವರು ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂದು ಡಾ| ಕೃಷ್ಣಮೂರ್ತಿ ತಿಳಿಸಿದರು.

ಹುಡುಗಾಟ ಬೇಡ

ಜಿಲ್ಲೆಯ ಜೀವನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ಯಿಂದಿರಬೇಕು. ನದಿಯ ಬದಿ ಹೋಗಿ ಹುಡುಗಾಟ ಮಾಡುವುದಾಗಲೀ, ಸೆಲ್ಫಿ ತೆಗೆಯುವುದಾಗಲಿ ಮಾಡಬಾರದು ಎಂದು ಡಾ| ಎಚ್.ಕೆ. ಕೃಷ್ಣಮೂರ್ತಿ ಮನವಿ ಮಾಡಿದರು
Advertisement

Udayavani is now on Telegram. Click here to join our channel and stay updated with the latest news.

Next