Advertisement

ಉಪ್ಪಿನಂಗಡಿ; ಹಿಂದೂ ಯುವತಿಯ ಅಕ್ರಮ ಬಂಧನ; ರಕ್ಷಣೆ

10:51 AM Feb 03, 2022 | Team Udayavani |

ಉಪ್ಪಿನಂಗಡಿ, ಫೆ. 2: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಮುಸ್ಲಿಂ ಸಮುದಾಯದ ಮನೆಯಲ್ಲಿ ಹಿಂದೂ ಸಮುದಾಯದ ಯುವತಿಯನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ಮಾಹಿತಿಯಿಂದಾಗಿ ತಡ ರಾತ್ರಿ ಪೊಲೀಸ್‌ ಕಾರ್ಯಾಚರಣೆ ನಡೆಸಿ ಯುವತಿಯನ್ನು ವಶಕ್ಕೆ ಪಡೆದು ಆಕೆಯ ಹೆತ್ತವರ ಮನೆಗೆ ಕಳುಹಿಸಿಕೊಟ್ಟ ಘಟನೆ ವರದಿಯಾಗಿದೆ.

Advertisement

ಯುವತಿ ಪಿಲಿಗೂಡಿನ ಸಂಶುದ್ದೀನ್‌ ಎಂಬಾತನ ಮನೆಯಲ್ಲಿ ಅಕ್ರಮ ವಶದಲ್ಲಿದ್ದಾಳೆಂಬ ಮಾಹಿತಿಯನ್ನು ಸ್ಥಳೀಯ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಯುವತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ, ತಾನು ಸ್ವ ಇಚ್ಚೆಯಿಂದ ನನ್ನ ಗೆಳತಿ ಮನೆಗೆ ಬಂದಿರುವುದಾಗಿ ತಿಳಿಸಿದ ಕಾರಣಕ್ಕೆ ಆಕೆಯಿಂದ ಹೇಳಿಕೆ ಪಡೆದು ಆಕೆಯ ಹೆತ್ತವರ ಮನೆಗೆ ಕಳುಹಿಸಿಕೊಡಲಾಗಿತ್ತು.

ಈ ವಿದ್ಯಮಾನದ ಬೆನ್ನಿಗೆಯೇ ಸಂಶುದ್ದೀನ್‌ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ರಕ್ಷಿತ್‌, ಯಶೋಧರ, ಕಾರ್ತಿಕ್‌, ಹರೀಶ್‌, ಬಾಬು, ದೇವರಾಜ್‌ ಮತ್ತಿತರರು ತನ್ನ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ತನ್ನಲ್ಲಿ ಹಾಗೂ ತನ್ನ ದೊಡ್ಡಮ್ಮನಲ್ಲಿ ನಿಮ್ಮ ಮನೆಯಲ್ಲಿ ಯಾರಾದರೂ ಹಿಂದೂ ಯುವತಿ ಇದ್ದಾರಾ ಎಂದು ಪ್ರಶ್ನಿಸಿದ್ದು, ತಾನು ತನ್ನ ಪತ್ನಿಯ ಗೆಳತಿ ಮನೆಯಲ್ಲಿ ಇರುವುದನ್ನು ತಿಳಿಸಿದಾಗ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ್ದಾರೆ. ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ನಡೆಗೆ ಆಕ್ರೋಶ
ಯುವತಿಯ ಅಕ್ರಮ ಬಂಧನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರ ಸಮಕ್ಷಮವೇ ಯುವತಿಯ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಘಟನಾವಳಿಯ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದರೂ, ಸತ್ಯ ಏನೆನ್ನುವುದು ಪೊಲೀಸರಿಗೆ ಗೊತ್ತಿದ್ದರೂ ಪ್ರಕರಣದಲ್ಲಿ ಸಂಶಯಕ್ಕೆ ತುತ್ತಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ ಕೂಡಲೇ ಪ್ರಕರಣ ದಾಖಲಿಸಲು ಪೊಲೀಸರು ಮುತುವರ್ಜಿ ವಹಿಸಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಕ್ರಮವನ್ನು ಸಾರ್ವಜನಿಕರು ಕೂಡ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next