ಬೆಂಗಳೂರು/ವಿಜಯಪುರ: ವಿಜಯಪುರ- ಬಾಗಲಕೋಟೆ ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ತಿನ ದ್ವಿಸದಸ್ಯ ಕ್ಷೇತ್ರದ ಪೈಕಿ ಖಾಲಿ ಇದ್ದ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ್ 4,819 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ ವಿರುದ್ಧ 2,040 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇವಲ 2,779 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ಸೇರಿ ವಿಧಾನಸಭೆಗೆ ಪ್ರವೇಶಿಸಿದ್ದರಿಂದ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅ.3ಕ್ಕೆ ಮೂರು ಸ್ಥಾನಗಳಿಗೆ ಎಲೆಕ್ಷನ್: ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಖಾಲಿ ಸ್ಥಾನಗಳಿಗೆ ಅ.3 ರಂದು ಉಪಚುನಾವಣೆ
ನಡೆಯಲಿದೆ. ಕಾಂಗ್ರೆಸ್‌ನ ಪರಮೇಶ್ವರ, ಬಿಜೆಪಿ ಯ ಈಶ್ವರಪ್ಪ, ಸೋಮಣ್ಣ ವಿಧಾನಸಭೆ ಪ್ರವೇಶಿಸಿದ್ದರಿಂದ ರಾಜೀನಾಮೆ ನೀಡಿದ್ದರು. ಅಂದು ಬೆ.9 ರಿಂದ ಸಂಜೆ 4 ರವರೆಗೆ ಮತದಾನ, 5 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ಸೆ.14ರಂದು ಅಧಿಸೂಚನೆ, ನಾಮಪತ್ರ ಸಲ್ಲಿಕೆಗೆ ಸೆ.22ರ ಕೊನೆ ದಿನ. ಸೆ.24 ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್ ಪಡೆಯಲು ಸೆ. 26 ಕೊನೆ ದಿನವಾಗಿದೆ.