ಹುಬ್ಬಳ್ಳಿ: ದೇಸಾಯಿ ವೃತ್ತದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ ಗುಣಮಟ್ಟದ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಅಧಿಕಾರಿಗಳೊಂದಿಗೆ ಸೇತುವೆ ಕಾಮಗಾರಿ ಪರಿಶೀಲಿಸಿದ ಸಚಿವರು, ಸೇತುವೆ ರಸ್ತೆ ಅಂಕುಡೊಂಕಾಗಿರುವುದು, ಹಳೆಯ ಪ್ಯಾನಲ್ಗಳನ್ನು ಅಳವಡಿಸಿರುವುದು, ಪ್ಯಾನೆಲ್ಗಳನ್ನು ಬೇಕಾಬಿಟ್ಟಿಯಾಗಿ ಜೋಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈ ರೀತಿ ಕಾಮಗಾರಿ ನಿರ್ವಹಿಸಿದರೆ ಹೇಗೆ? ನೋಡಲು ಅಚ್ಚುಕಟ್ಟಾಗಿ ಕಾಣುತ್ತಿಲ್ಲ ಎಂದು ಅಧಿಕಾರಿಗಳನ್ನು ಹಾಗೂ ಗುತ್ತಿಗೆದಾರರನ್ನು ಪ್ರಶ್ನಿಸಿದರು.
ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದ್ದರಿಂದ ಇನ್ನೊಂದು ಕಡೆಯಿಂದ ಪ್ಯಾನಲ್ಗಳನ್ನು ತರಲಾಗಿದೆ ಎಂದು ಗುತ್ತಿಗೆದಾರರು ಉತ್ತರಿಸಿದರು.
ಸಮಾಧಾನ ತಂದಿಲ್ಲ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸೇತುವೆ ವೀಕ್ಷಣೆ ಮಾಡಿದ್ದು, ಕಾಮಗಾರಿ ಗುಣಮಟ್ಟ ಸಮಾಧಾನ ತಂದಿಲ್ಲ. ಹಳೆಯ ಪ್ಯಾನೆಲ್ಗಳನ್ನು ಬಳಸಲಾಗಿದೆ. ಇತರೆ ಕಾಮಗಾರಿಗೆ ಬಳಸಿದಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಏನಾದರೂ ಅವಘಡಗಳು ನಡೆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳೇ ನೇರ ಹೊಣೆಗಾರರು. ಇತ್ತೀಚೆಗೆ ಧಾರವಾಡ ಕಟ್ಟಡ ದುರಂತದ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಯಾವ ಪರಿಸ್ಥಿತಿ ಬಂದಿದೆ ಎಂಬುದು ನಮ್ಮ ಕಣ್ಣ ಮುಂದಿದೆ ಎಂದರು.
ಸೇತುವೆ ಕಾಮಗಾರಿ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಯೋಜನೆ ವಿನ್ಯಾಸ ಹಾಗೂ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡುವಂತೆ ಖಾಸಗಿ ಎಂಜಿನಿಯರ್ ಒಬ್ಬರಿಗೆ ಸೂಚಿಸುತ್ತೇನೆ. ಸೇತುವೆ ನಿರ್ಮಾಣಕ್ಕೆ 45 ದಿನಗಳ ಕಾಲಾವಧಿ ಇದ್ದಿದ್ದರಿಂದ ಪ್ಯಾನಲ್ ತಯಾರಿಸಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಬೇರೆಡೆ ನಡೆಯುತ್ತಿರುವ ಕಾಮಗಾರಿಯ ಪ್ಯಾನಲ್ ಹಾಕಿದ್ದಾರೆ. ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಮುರಿದಿರುವ ಹಾಗೂ ಹಳೆಯ ಪ್ಯಾನಲ್ಗಳನ್ನು ಬದಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜೋಶಿ ತಿಳಿಸಿದರು.
ಇಇ ಎನ್.ಎಂ.ಕುಲಕರ್ಣಿ, ಎಇಇ ಕೃಷ್ಣಾ ರಡ್ಡಿ, ಮಾಜಿ ಮಹಾಪೌರ ಸುಧೀರ ಸರಾಫ್, ಗುತ್ತಿಗೆದಾರ ವಿಎಸ್‌ವಿ ಪ್ರಸಾದ, ಮಹೇಶ ಟೆಂಗಿನಕಾಯಿ ಇನ್ನಿತರರಿದ್ದರು.