Advertisement
ಮುಂಗಡ ಕಾಯ್ದಿರಿಸುವ ಸೌಲಭ್ಯವೂ ಲಭ್ಯಫ್ರಾನ್ಸ್ನ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್ ಟವರ್‌ನಲ್ಲಿ ಯುಪಿಐ ಸೇವೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಇದು ಭಾರತೀಯ ಪ್ರವಾಸಿಗರಿಗೆ ಅತ್ಯಂತ ಸಹಾಯಕಾರಿಯಾಗಿದ್ದು, ಇನ್ನುಮುಂದೆ ಫ್ರಾನ್ಸ್‌ನಲ್ಲಿಯೂ ಭಾರತೀಯ ಕರೆನ್ಸಿಯಾದ ರೂಪಾಯಿಯಲ್ಲಿ ಹಣವನ್ನು ಪಾವತಿಸಬಹುದು. ಅಲ್ಲದೇ ಐಫೆಲ್ ಟವರ್‌ಗೆ ಭೇಟಿ ನೀಡ ಬಯಸುವ ಭಾರತೀಯರು ಯುಪಿಐ ಮೂಲಕ ಮುಂಗಡ ಕಾಯ್ದಿರಿಸುವ ಸೇವೆಯನ್ನು ಪಡೆಯಬಹುದು.
ಫ್ರಾನ್ಸ್‌ನ ಐಫೆಲ್ ಟವರ್‌ಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರವಾಸಿಗರ ಪೈಕಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಹಿಂದೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಹಣವನ್ನು ಪಾವತಿಸಬೇಕಿತ್ತು. ಇಲ್ಲವೇ ವಿದೇಶಿ ಕರೆನ್ಸಿಯನ್ನು ಕೊಂಡೊಯ್ಯಬೇಕಿತ್ತು. ಈಗ ಯುಪಿಐ ಬಳಕೆಗೆ ಅವಕಾಶ ಕಲ್ಪಿಸಿರುವುದರಿಂದ ಭಾರತೀಯರು ಈ ಎಲ್ಲ ಚಿಂತೆಗಳಿಂದ ಮುಕ್ತರಾಗಿದ್ದು, ಸುಲಭವಾಗಿ ಪಾವತಿಗಳನ್ನು ಮಾಡಬಹುದಾಗಿದೆ. ಐಫೆಲ್ ಟವರ್ ಈ ಸೇವೆಯನ್ನು ನೀಡುತ್ತಿರುವ ಫ್ರಾನ್ಸ್ ನ ಮೊದಲ ತಾಣವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಸ್ಥಳಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ. ಎನ್‌ಪಿಸಿಐ(ಐಪಿ)-ಲೈರಾ ನಡುವಣ ಒಪ್ಪಂದ
ಯುಪಿಐ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ)ದ ಅಂಗವಾದ ಎನ್‌ಪಿಸಿಐ ಇಂಟರ್‌ನ್ಯಾಶನಲ್ ಪೇಮೆಂಟ್ಸ್ ಮತ್ತು ಫ್ರಾನ್ಸ್‌ನ ಡಿಜಿಟಲ್ ಪೇಮೆಂಟ್ ಕಂಪೆನಿ ಲೈರಾದೊಂದಿಗಿನ ಒಪ್ಪಂದವು ಯುರೋಪ್‌ನಲ್ಲಿ ಯುಪಿಐ ಅನ್ನು ಪರಿಚಯಿಸುವಲ್ಲಿ ನೆರವಾಗಿದೆ. ಭಾರತೀಯರು ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಸುಲಭವಾಗಿ ಪಾವತಿಸಬಹುದು. ಅಷ್ಟು ಮಾತ್ರವಲ್ಲದೆ ಆ ದೇಶದ ಕರೆನ್ಸಿಯೊಂದಿಗೆ ರೂಪಾಯಿ ವಿನಿಮಯ, ಅಲ್ಲಿನ ಕರೆನ್ಸಿಯನ್ನು ತಮ್ಮ ಬಳಿ ಇರಿಸಿಕೊಂಡು ತಿರುಗಾಡುವ ಅನಿವಾರ್ಯತೆ ತಪ್ಪಿದಂತಾಗಿದೆ.
Related Articles
ಯುಪಿಐ ಅನ್ನು ವಿಶ್ವಮಾನ್ಯಗೊಳಿಸುವ ಭಾರತದ ಗುರಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಫ್ರಾನ್ಸ್ ನೊಂದಿಗೆ ಸಿಂಗಾಪುರ, ಭೂತಾನ್, ನೇಪಾಲ ಮತ್ತು ವಿವಿಧ ದೇಶದಲ್ಲೂ ಈ ಸೇವೆಯು ಲಭ್ಯವಿದೆ. ಭಾರತದಲ್ಲಿ ಯುಪಿಐ ಅತೀ ದೊಡ್ಡ ಮಟ್ಟದ ಬಳಕೆದಾರರನ್ನು ಹೊಂದಿದೆ. ಈ ವರ್ಷದ ಮೊದಲ ತಿಂಗಳಿನಲ್ಲೇ 12.2 ಬಿಲಿಯನ್‌ಗೂ ಅಧಿಕ ವಹಿವಾಟನ್ನು ಮಾಡಿದೆ.
Advertisement
ಮ್ಯಾಕ್ರನ್ ಮನಸೆಳೆದಿದ್ದ ಯುಪಿಐ!ಈ ಬಾರಿಯ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಆಗಮಿಸಿದ್ದ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ರಾಜಸ್ಥಾನದ ಜೈಪುರದ ಚಹಾ ಅಂಗಡಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಯುಪಿಐ ಮೂಲಕ ಹಣವನ್ನು ಪಾವತಿಸಿದ್ದರು. ಅವರ ಈ ಭೇಟಿಯ ಬಳಿಕ ಫ್ರಾನ್ಸ್‌ನಲ್ಲಿ ಯುಪಿಐ ಬಳಕೆ ಸಂಬಂಧ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿತ್ತು. ಈಗ ಐಫೆಲ್ ಟವರ್‌ನಲ್ಲಿ ಯುಪಿಐ ಪಾವತಿ ಸೇವೆಯನ್ನು ಪರಿಚಯಿಸಲಾಗಿದ್ದು, ಫ್ರಾನ್ಸ್ ನ ಭಾರತೀಯ ರಾಯಭಾರ ಕಚೇರಿ ಈ ವಿಷಯವನ್ನು ಹಂಚಿಕೊಂಡಿದೆ.