ಹೊಸದಿಲ್ಲಿ : ಶರಣಾಗತಿಗೆ ಇನ್ನಷ್ಟು ಕಾಲಾವಕಾಶ ಕೋರಿದ್ದ ಉಪಹಾರ್ ಥಿಯೇಟರ್ ಮಾಲಕ ಗೋಪಾಲ್ ಬನ್ಸಾಲ್ ಗೆ ಸುಪ್ರೀಂ ಕೋರ್ಟ್ ಯಾವುದೇ ರಿಲೀಫ್ ನೀಡಿಲ್ಲ. ಕೂಡಲೇ ಶರಣಾಗುವಂತೆ ಅದು ಬನ್ಸಾಲ್‌ಗೆ ಆದೇಶಿಸಿದೆ.
ರಾಷ್ಟ್ರಪತಿಯವರಲ್ಲಿ ದಯಾ ಭಿಕ್ಷೆ ಹಾಗೂ ಕ್ಷಮೆಯಾಚಿಸಿ ತಾನು ಅರ್ಜಿ ಹಾಕಿರುವುದರಿಂದ ತನಗೆ ಶರಣಾಗತಿಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಬನ್ಸಾಲ್ ಕೋರಿದ್ದರು.
ಉಪಹಾರ್ ಥಿಯೇಟರ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿರುವ ಜೈಲು ಶಿಕ್ಷೆಯ ಬಾಕಿ ಉಳಿದಿರುವ ಅವಧಿಯನ್ನು ಪೂರೈಸುವುದಕ್ಕಾಗಿ ಕೂಡಲೇ ಶರಣಾಗುವಂತೆ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್, ಜಸ್ಟಿಸ್ ಡಿ ವೈ ಚಂದ್ರಚೂಡ್ ಮತ್ತು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠವು ಆದೇಶಿಸಿತು.
ಅನ್ಸಾಲ್ ಪರವಾಗಿ ವಾದಿಸಿದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಕಕ್ಷಿದಾರ ಬನ್ಸಾಲ್‌ಗೆ ಶರಣಾಗುವುದಕ್ಕೆ ಕಾಲಾವಕಾಶ ಕೋರಿದಾಗ, ಪೀಠವು, “ಕ್ಷಮಿಸಿ, ಅದು ಸಾಧ್ಯವಿಲ್ಲ’ ಎಂದು ಖಂಡತುಂಡವಾಗಿ ಹೇಳಿತು.
1997ರ ಜೂನ್ 13ರಂದು “ಬಾರ್ಡರ್’ ಚಿತ್ರವನ್ನು ಪ್ರದರ್ಶಿಸುತ್ತಿದ ವೇಳೆ ದಿಲ್ಲಿಯ ಉಪಹಾರ್ ಸಿನೇಮಾದಲ್ಲಿ ಬೆಂಕಿ ದುರಂತ ಉಂಟಾಗಿ 59 ಮಂದಿ ಮೃತಪಟ್ಟು ಇತರ ನೂರಕ್ಕೂ ಅಧಿಕ ಮಂದಿ ಕಾಲ್ ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದರು. ಸುಮಾರು 20 ವರ್ಷ ಕಾಲ ಈ ಕೇಸು ನ್ಯಾಯಾಲಯದಲ್ಲಿ ಮುಂದುವರಿದುಕೊಂಡು ಬಂದಿತ್ತು.