Advertisement

ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಮೇಲ್ದರ್ಜೆಗೆ

02:28 PM Oct 08, 2018 | Team Udayavani |

ರಾಯಚೂರು: ನಗರದ ಕೇಂದ್ರ ಬಸ್‌ ನಿಲ್ದಾಣದ ಮೇಲ್ದರ್ಜೆಗೆ ಎಚ್‌ಕೆಆರ್‌ಡಿಬಿಯಿಂದ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಸಾಕಷ್ಟು ಬದಲಾವಣೆಗಳ ನಿರೀಕ್ಷೆ ಇವೆ. ಮುಖ್ಯವಾಗಿ ಒಂದನೇ ಡಿಪೋವನ್ನು ಸಿಟಿ ಬಸ್‌ ನಿಲ್ದಾಣವನ್ನಾಗಿಸುವುದು ಹಾಗೂ ಒಂದು ಕೋಟಿ ರೂ. ವೆಚ್ಚದಲ್ಲಿ ಕೋಟೆ ಕೆಳಭಾಗದ ಕಂದಕ ಮುಚ್ಚಿಸಿ ಶೆಲ್ಟರ್‌ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

Advertisement

ಕಳೆದ ದಶಕಕ್ಕೆ ಹೋಲಿಸಿದರೆ ಕೇಂದ್ರ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಸ್ಥಳ ಮಾತ್ರ ಕಿಷ್ಕಿಂದೆಯಂತಾಗಿದೆ. ಹೀಗಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ನಿಲ್ದಾಣ ಮೇಲ್ದರ್ಜೆಗೇರಿಸಲು ಎಚ್‌ಕೆಆರ್‌ ಡಿಬಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಅದಕ್ಕೆ ಪ್ರತಿಕ್ರಿಯೆ ಬಂದಿದ್ದು ಬಸ್‌ ನಿಲ್ದಾಣ ಮೇಲ್ದರ್ಜೆ ಕೆಲಸಗಳಿಗೆ ಒಂದು ಕೋಟಿ ರೂ. ನೀಡಲು ಅನುಮೋದನೆ ಸಿಕ್ಕಿದೆ. ಆದರೆ, ಅನುದಾನ ಬರಬೇಕಿದ್ದು, ಬಂದ ಮರುಕ್ಷಣವೇ ಕಾಮಗಾರಿ ಶುರುವಾಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ

ಮೇಲ್ದರ್ಜೆ ಉದ್ದೇಶ: ಈಗಿರುವ ಬಸ್‌ ನಿಲ್ದಾಣದಲ್ಲಿ ಸ್ಥಳಾಭಾವ ಸಮಸ್ಯೆ ಕಾಡುತ್ತಿದೆ. ಏಕಕಾಲಕ್ಕೆ ಬಸ್‌ಗಳು ಬಂದಲ್ಲಿ ತೊಂದರೆಯಾಗುತ್ತದೆ. ಆದರೆ, ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೋಟೆ ಕಂದಕ ನಿರುಪಯುಕ್ತವಾಗಿದ್ದು, ಅದನ್ನು ಸಮತಟ್ಟು ಮಾಡಿ ಬಸ್‌ ನಿಲುಗಡೆಗೆ ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಪ್ರಾಚ್ಯವಸ್ತು ಇಲಾಖೆಯವರು ಕೋಟೆ ಪಕ್ಕ ದೊಡ್ಡ ಕಟ್ಟಡಗಳನ್ನು ಕಟ್ಟದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಅಲ್ಲಿ ಕಂದಕವನ್ನು ಸಂಪೂರ್ಣ ಮುಚ್ಚಿಸಿ ಕೇವಲ ಬಸ್‌ ಶೆಲ್ಟರ್‌ ಮಾತ್ರ ನಿರ್ಮಿಸುವ ಯೋಜನೆಯಿದೆ. ಅದರ ಜತೆಗೆ ಶೌಚಗೃಹವನ್ನು ತೆರವುಗೊಳಿಸಿ ಅದನ್ನು ಹಿಂದಕ್ಕೆ ನಿರ್ಮಿಸಿ, ತೆರವಾದ ಸ್ಥಳವನ್ನು ಸಂಪೂರ್ಣ ಬೈಕ್‌ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳುವ ಚಿಂತನೆ ಇದೆ. ಇದರಿಂದ
ನಿಲ್ದಾಣದಲ್ಲಿ ಬಸ್‌ ಸಂಚಾರವೂ ಸುಗಮಗೊಳ್ಳಲಿದೆ, ಸ್ಥಳಾವಕಾಶವೂ ಹೆಚ್ಚಾಗಲಿದೆ.

ಸಿಟಿ ಬಸ್‌ ಸ್ಟಾಪ್‌ ಬದಲಾವಣೆ: ಅದರ ಜತೆಗೆ ಬಹುವರ್ಷಗಳ ಯೋಜನೆಯಾದ ಸಿಟಿ ಬಸ್‌ ನಿಲ್ದಾಣ ಸ್ಥಳಾಂತರ ಯೋಜನೆಗೂ ಸಮ್ಮತಿ ಸಿಕ್ಕಿದೆ. ಇದಕ್ಕಾಗಿ ಐದು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಎಚ್‌ಕೆಆರ್‌ಡಿಬಿ ಗ್ರೀನ್‌ ಸಿಗ್ನಲ್‌ ನೀಡಿದ್ದು, ಕೇಂದ್ರ ಬಸ್‌ ನಿಲ್ದಾಣ ಮುಂಭಾಗದ ಒಂದನೇ ಡಿಪೋ ಸಿಟಿ ಬಸ್‌ ನಿಲ್ದಾಣವಾಗಿ ಮಾರ್ಪಡಲಿದೆ. ಈಗಾಗಲೇ ಮೂರನೇ ಡಿಪೋ ಕೂಡ ಸೇವೆಗೆ ಮುಕ್ತಗೊಂಡಿದೆ. ಒಂದನೇ ಡಿಪೋವನ್ನು 2ರಲ್ಲಿ ಸಂಯೋಜಿಸುವ ಉದ್ದೇಶವಿದೆ. ಖಾಲಿಯಾದ ಒಂದನೇ ಡಿಪೋ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಸಿಟಿ ಬಸ್‌ಗಳ ನಿಲುಗಡೆಗೆ ಬಳಸಿಕೊಳ್ಳುವ ಯೋಜನೆಯಿದೆ.

ಮಾನ್ವಿಯಲ್ಲೂ ಸ್ಥಳಾಂತರ
ಇದು ಕೇವಲ ರಾಯಚೂರು ನಗರ ಬಸ್‌ ನಿಲ್ದಾಣಕ್ಕೆ ಮಾತ್ರವಲ್ಲ ಮಾನ್ವಿ ಬಸ್‌ ನಿಲ್ದಾಣದಲ್ಲೂ ಕೆಲ ಬದಲಾವಣೆ ಸಾಧ್ಯತೆಗಳಿವೆ. ಅಲ್ಲಿನ ಡಿಪೋವನ್ನು ಬಸ್‌ ನಿಲ್ದಾಣವನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ. ರಾಯಚೂರು ರಸ್ತೆಯಲ್ಲಿರುವ ಎಲ್‌ಐಸಿ ಕಚೇರಿ ಬಳಿ ಐದು ಎಕರೆ ಜಮೀನು ನಿಗಮಕ್ಕೆ ಹಸ್ತಾಂತರವಾಗಿದ್ದು, ಅಲ್ಲಿಗೆ ಡಿಪೋ ಸ್ಥಳಾಂತರ ಮಾಡಲಾಗುತ್ತಿದೆ. ನಿಲ್ದಾಣವನ್ನು ಹಳೇ ಡಿಪೋ ಸ್ಥಳದಲ್ಲಿ ನಿರ್ಮಿಸುವ ಸಾಧ್ಯತೆಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ನಿಗಮವೂ ಬದಲಾವಣೆ ಬಯಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಅಂದುಕೊಂಡ ಯೋಜನೆಗಳು ತ್ವರಿತಗತಿಯಲ್ಲಿ ಮುಗಿಸಿದರೆ ಅನುಕೂಲ ಎಂಬುದು ಪ್ರಯಾಣಿಕರ ಅನಿಸಿಕೆ.

Advertisement

ಕೇಂದ್ರ ಬಸ್‌ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು, ಒಂದನೇ ಡಿಪೋವನ್ನು ನಿಲ್ದಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಎಚ್‌ಕೆಆರ್‌ಡಿಬಿ ಒಟ್ಟು ಆರು ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು. 
 ಶ್ರೀರಾಮ್‌ ಬಿ., ವಿಭಾಗೀಯ ನಿಯಂತ್ರಣಾಧಿಕಾರಿ, ಈಶಾನ್ಯ ಸಾರಿಗೆ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next