ಬೆಂಗಳೂರು : ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸೋಷಿಯಲ್ ವರ್ಕ್ ಮಾಡುತ್ತಿರುವ ನಟ ಉಪೇಂದ್ರ ವಿರುದ್ದ ಕೊಂಕು ಮಾತುಗಳು ಮುಂದುವರೆದಿವೆ. ಉಪ್ಪಿಯ ಸಮಾಜ ಸೇವೆಯನ್ನು ಸಹಿಸಿಕೊಳ್ಳದ ಕೆಲವೊಂದು ಮನಸ್ಥಿತಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಉಪೇಂದ್ರ ಅವರ ರೆಸಾರ್ಟ್ ಸೇರಿದಂತೆ ಹಲವು ವಿಚಾರಗಳನ್ನು ಕೆದಕುವ ಕೆಲಸಕ್ಕೆ ಕೈ ಹಾಕಿದ್ದಾರೆ.
ನಿನ್ನೆಯಷ್ಟೆ ವ್ಯಕ್ತಿಯೋರ್ವ ಉಪೇಂದ್ರ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ಉಪ್ಪಿ ಒಡೆತನದ ರುಪ್ಪಿಸ್ ರೆಸಾರ್ಟ್ ರೈತರ ಜಮೀನು ಕಿತ್ತುಕೊಂಡು ನಿರ್ಮಿಸಲಾಗಿದೆ ಎಂದು ದೂರಿದ್ದ. ಅವರ ಆರೋಪಗಳಿಗೆ ಉಪೇಂದ್ರ ಅವರು ಈಗ ದಾಖಲೆಯ ಸಮೇತ ಪ್ರತ್ಯುತ್ತರ ನೀಡಿದ್ದಾರೆ.
‘ಸಮಾಜಿಕ ಜಾಲತಾಣದಲ್ಲಿ ವಿಡಿಯೊ ಮಾಡಿ ನನ್ನ ಒಂದಿಷ್ಟು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಡಲು ಬಂದಿದ್ದೀನಿ. ಮೊದಲನೆ ಪ್ರಶ್ನೆ ನಾನು ರೈತರ ಭೂಮಿ ಕಿತ್ತುಕೊಂಡು ರೆಸಾರ್ಟ್ ಮಾಡಿದ್ದೀವಿ ಅಂತ ಹೇಳುತ್ತಿದ್ದಾರೆ. ದಯವಿಟ್ಟು ತಾವು ಏನಾದರು ಹೇಳುವ ಮುಂಚೆ ದಾಖಲೆಗಳನ್ನು ಪರಿಶೀಲಿಸಿ. ಸುಮಾರು 13-14 ವರ್ಷಗಳ ಹಿಂದೆ ವಿಲೇಜ್ ಅಂತ ಒಂದು ರೆಸಾರ್ಟ್ ಇತ್ತು. ಅದು ಹರಾಜಿಗೆ ಬಂದಿತ್ತು ಅದನ್ನು ಸರ್ಕಾರದಿಂದ ನೇರವಾಗಿ ಖರೀದಿ ಮಾಡಿ ಉಪ್ಪಿ ರೆಸಾರ್ಟ್ ಮಾಡಿರುವುದು. ಅದು ಮೊದಲು ಕೂಡ ರೆಸ್ಟಾರ್ಟ್ ಆಗಿತ್ತು’ ಎಂದಿದ್ದಾರೆ.
ಅದರ ಹಿಂದೆ ಇರುವುದು ಜಮೀನು. ಅದನ್ನು ಶಿವಣ್ಣ ಅವರಿಂದ ಖರೀದಿ ಮಾಡಿದ್ದು, ಇವತ್ತಿಗೂ ಕೂಡ ಅಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ತರಕಾರಿ ಬೆಳೆದಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ತಮಗೆ ಅನುಮಾನ ಇದ್ದರೆ ನಾವು ರೆಸಾರ್ಟ್ ಗೆ ಬಂದು ನೋಡಿ, ಮತ್ತು ಜಮೀನನ್ನು ನೋಡಿ’ ಎಂದು ಹೇಳಿದ್ದಾರೆ.
ಇನ್ನು ಯಾಕೆ ಹೋರಾಟದಲ್ಲಿ ಭಾಗವವಿಸಲಿಲ್ಲ ಮತ್ತು ಈಗಿರುವ ಆಡಳಿತವನ್ನು ಯಾಕೆ ಖಂಡಿಸಲ್ಲ ಎಂದು ಪ್ರಶ್ನೆ ಮಾಡಿದ್ದೀರಿ. ನಾವು ಯಾವುದನ್ನು ಖಂಡಿಸಿಲ್ಲ. ಹೋರಾಟ ಮಾಡಿಲ್ಲ, ಖಂಡಿಸಿಲ್ಲ. ಯಾಕೆಂದರೆ ನನಗೆ ಅದರಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.
ಮೊದಲು ಜನ ಬದಲಾಗಬೇಕು. ನಾಯಕ ಸಂಸ್ಕೃತಿಯಿಂದ ರಾಜಕೀಯ ಬ್ಯುಸಿನೆಸ್ ಮಾಡಿ ಅಲ್ಲಿ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಲು ಕಾರಣ ನಾವು ಕೂಡ. ಪ್ರಚಾರ, ಜಾತಿ, ಧರ್ಮ ಇಲ್ಲದೆ ಮತಹಾಕಲ್ಲ. ಇದೆಲ್ಲವೂ ನಮ್ಮ ತಪ್ಪು. ಆದರೆ ನಮ್ಮ ಪ್ರಜಾಕೀಯ ಹಾಗಲ್ಲ’ ಎಂದಿದ್ದಾರೆ.