Advertisement

ಡಿಸೆಂಬರ್ ಅಂತ್ಯದೊಳಗೆ ನಿಮ್ಮ ಅಕೌಂಟ್ KYC ಅಪ್ಡೇಟ್ ಮಾಡಿ; ಇಲ್ಲದಿದ್ರೆ ಏನಾಗುತ್ತೆ ಗೊತ್ತಾ?

10:10 AM Oct 11, 2019 | Hari Prasad |

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ‘ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ’ (ಕೆ.ವೈ.ಸಿ.) ನೀತಿಗಳನ್ನು ಪರಿಷ್ಕೃತಗೊಳಿಸಿದ್ದು ಆ ಪ್ರಕಾರ ಎಲ್ಲಾ ಬ್ಯಾಂಕ್ ಖಾತೆದಾರರು ತಮ್ಮ ಕೆ.ವೈ.ಸಿ.ಯನ್ನು 2020ರ ಜನವರಿ ತಿಂಗಳ ಒಳಗೆ ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಲಿದೆ. ಇದಕ್ಕೆ ತಪ್ಪಿದಲ್ಲಿ ಅಂತಹ ಖಾತೆದಾರರ ಬ್ಯಾಂಕ್ ಖಾತೆಗಳು ರದ್ದುಗೊಳ್ಳುವ ಸಾಧ್ಯತೆಗಳಿವೆ.

Advertisement

ಗ್ರಾಹಕ ಜಾಗೃತಿಯ ಉದ್ದೇಶಕ್ಕಾಗಿ ಆರ್.ಬಿ.ಐ. ಈ ಕಟ್ಟುನಿಟ್ಟಿನ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ದೇಶಿಸಿದ್ದು ಆ ಪ್ರಕಾರವಾಗಿ ಎಸ್.ಬಿ.ಐ., ಐಡಿಬಿಐ, ಐಸಿಸಿಐ ಸೇರಿದಂತೆ ಸಾರ್ವಜನಿಕ ರಂಗದ ಬ್ಯಾಂಕುಗಳು ತಮ್ಮೆಲ್ಲಾ ಖಾತೆದಾರರಿಗೆ ಈ ಕುರಿತಾದ ಮಾಹಿತಿಯನ್ನು ಎಸ್.ಎಂ.ಎಸ್., ಇ-ಮೆಲ್ ಹಾಗೂ ಇನ್ನಿತರ ರೂಪದಲ್ಲಿ ನಿರಂತರವಾಗಿ ಕಳುಹಿಸುತ್ತಿವೆ.

ಬ್ಯಾಂಕ್ ಖಾತೆದಾರರು ತಮ್ಮ ಕೆ.ವೈ.ಸಿ.ಯನ್ನು ಬ್ಯಾಂಕ್ ಗೆ ಸಲ್ಲಿಸಲು ಮುಂದಿನ ವರ್ಷದ ಜನವರಿ 01 ಕಡೆಯ ದಿನವಾಗಿದ್ದರೆ, ಫೋನ್ ಪೇ, ಪೇಟಿಯಂ, ಅಮೆಝಾನ್ ಪೇ ಅಥವಾ ಈ ರೀತಿಯ ವ್ಯಾಲೆಟ್ ಗಳನ್ನು ಬಳಸುತ್ತಿರುವವರು ತಮ್ಮ ಕೆ.ವೈ.ಸಿ.ಯನ್ನು ಮುಂದಿನ ವರ್ಷದ ಫೆಬ್ರವರಿ 29ರ ಒಳಗೆ ಸಲ್ಲಿಸಬೇಕಾಗಿದೆ.

ತುಂಬಾ ಸಮಯದವರೆಗೆ ಕೆ.ವೈ.ಸಿ.ಯನ್ನು ಸಲ್ಲಿಸದಿರುವ ಖಾತೆದಾರರ ಖಾತೆಗಳನ್ನು ಸಂಬಂಧಪಟ್ಟ ಬ್ಯಾಂಕುಗಳ ಫ್ರೀಝ್ ಮಾಡುವ ಸಾಧ್ಯತೆ ಇರುವುದರಿಂದ ಖಾತೆದಾರರು ತಮ್ಮ ಕೆ.ವೈ.ಸಿ.ಗಳನ್ನು ಬ್ಯಾಂಕುಗಳಿಗೆ ಸಲ್ಲಿಸುವ ಮೂಲಕ ಈ ಅಪಾಯದಿಂದ ಪಾರಾಗಬಹುದು.

ಖಾತೆದಾರರು ತಮ್ಮ ಕೆ.ವೈ.ಸಿ.ಯನ್ನು ಸಲ್ಲಿಸಲು ತಾವು ಖಾತೆಗಳನ್ನು ಹೊಂದಿರುವ ಬ್ಯಾಂಕ್ ಶಾಖೆಗೆ ತೆರಳಿ ಅಲ್ಲಿ ಅಧಿಕಾರಿಗಳು ಕೇಳುವ ನಿರ್ಧಿಷ್ಟ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ. ಇನ್ನು ತಮ್ಮ ಖಾತೆಗಳನ್ನು ನಿಯಮಿತ ಅವಧಿಗೆ ಅಪ್ ಡೇಟ್ ಮಾಡಿಕೊಳ್ಳುತ್ತಿರುವ ಖಾತೆದಾರರು ತಮ್ಮ ಬ್ಯಾಂಕಿನ ವೆಬ್ ಸೈಟ್ ನಲ್ಲಿ ಕೆ.ವೈ.ಸಿ. ಸಲ್ಲಿಸುವ ಕಡೆ ‘ನನ್ನ ಕೆ.ವೈ.ಸಿ. ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ (No changes in my KYC Details) ಎಂಬ ಆಯ್ಕೆಗೆ ಕ್ಲಿಕ್ ಮಾಡಬೇಕು.

Advertisement

ಹೈ ರಿಸ್ಕ್ ಗ್ರಾಹಕರು ತಮ್ಮ ಕೆ.ವೈ.ಸಿ.ಯನ್ನು  ಪ್ರತೀ ಎರಡು ವರ್ಷಗಳಿಗೊಮ್ಮೆ ಅಪ್ ಡೇಟ್ ಮಾಡಬೇಕಾಗಿರುತ್ತದೆ. ಇನ್ನು ಮೀಡಿಯಂ ರಿಸ್ಕ್ ಗ್ರಾಹಕರು ತಮ್ಮ ಕೆ.ವೈ.ಸಿ.ಯನ್ನು ಎಂಡು ವರ್ಷಗಳಿಗೊಮ್ಮೆ ಅಪ್ ಡೇಟ್ ಮಾಡಿದರೆ ಸಾಕು.

ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಹಾಗೂ ಹಣಕಾಸು ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರ್.ಬಿ.ಐ. ಸೂಚನೆಯ ಮೇರೆಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕುಗಳು ಹಾಗೂ ಆನ್ ಲೈನ್ ಹಣಕಾಸು ವ್ಯವಹಾರ ನಡೆಸುವ ಅಪ್ಲಿಕೇಶನ್ ಗಳು ತಮ್ಮ ಗ್ರಾಹಕರು ಸುರಕ್ಷಿತ ವ್ಯವಹಾರವನ್ನು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಹಕರ ಗುರುತು ಹಾಗೂ ವಿಳಾಸದ ಮಾಹಿತಿಯನ್ನು ಪಡೆದುಕೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next