ಪರಿಚಯ ಇಲ್ಲದವರ ಜೊತೆ ಹೋದರೆ ಯಾವ ಅಪಾಯಗಳು ಎದುರಾಗಬಹುದು. ಹೇಗೆಲ್ಲ ದೌರ್ಜನ್ಯಗಳು ನಡೆದು ಜೀವಕ್ಕೂ ಕುತ್ತು ಬರಬಹುದು ಎಂಬುದನ್ನು ನಿರ್ದೇಶಕ ರಾಜೇಶ್ ಮೂರ್ತಿ “ಲಿಪ್ ಸ್ಟಿಕ್ ಮರ್ಡರ್’ ಸಿನಿಮಾದ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದಾರೆ.
ಈಗಾಗಲೇ ಫಸ್ಟ್‌ಕಾಪಿಯೊಂದಿಗೆ ಹೊರಬಂದಿರುವ “ಲಿಪ್‌ಸ್ಟಿಕ್ ಮರ್ಡರ್’ ಸಿನಿಮಾವನ್ನು, ಇತ್ತೀಚೆಗೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್, ಮ್ಯೂಟ್ಸ್ ಇಲ್ಲದೆ “ಯು/ಎ’ ಸರ್ಟಿಫಿಕೇಟ್ ನೀಡಿದೆ.
ಉತ್ತರ ಕರ್ನಾಟಕ ಮೂಲದ ಆರ್ಯನ್ ರಾಜ್ ಈ ಸಿನಿಮಾದಲ್ಲಿ ನಾಯಕನಾಗಿ, ಹೈದರಾಬಾದ್ ಮೂಲದ ಅಲೈಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್ ಮಿಶ್ರಾ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ನಿತೀಶ್ ಕುಮಾರ್ ಸಂಗೀತ ಸಂಯೋಜನೆ, ಆರ್. ವಿನೋದ್ ಛಾಯಾಗ್ರಹಣವಿದೆ. “ಸಿನಿವ್ಯಾಲಿ ಕ್ರಿಯೇಶನ್ಸ್’ ಮೂಲಕ ಬಿ. ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
“ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯರು, ಯುವಕರನ್ನು ಯಾವ ರೀತಿ ತಮ್ಮ ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಾರೆ ಎಂಬುದನ್ನು ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ಹೇಳಲಾಗಿದೆ’ ಎಂಬುದು ಚಿತ್ರತಂಡದ ಮಾತು.
ಇತ್ತೀಚೆಗಷ್ಟೇ “ಲಿಪ್‌ಸ್ಟಿಕ್ ಮರ್ಡರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.