ಹುಬ್ಬಳ್ಳಿ: ಉಪನಯನ ಕಾರ್ಯಕ್ರಮ ಬಾಲ್ಯದ ಜೀವನಕ್ಕೆ ಬುನಾದಿ ಇದ್ದಂತೆ ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ| ತೋಂಟದ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಗೋಕುಲ ರಸ್ತೆ ರವಿನಗರದ ಎಸ್‌ಎಸ್‌ಕೆ ಗೋಕುಲ ರೋಡ್ ಮಿತ್ರ ಮಂಡಳದಿಂದ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಎಸ್‌ಎಸ್‌ಕೆ ಸಮಾಜದ ಮಕ್ಕಳಿಗೆ ಉಪನಯನ ಎಂದರೆ ಬಾಲ್ಯವನ್ನು ಕಳೆದ ಪ್ರೌಢಾವಸ್ಥೆಗೆ ಬರುವ ಒಂದು ಹಂತ. ಜನಿವಾರ ಭಗವಂತನ ಸನ್ನಿಧಿಗೆ ಹೋಗಲು ಒಂದು ದಾರಿ ಎಂದು ಕೂಡಾ ಕರೆಯಬಹುದಾಗಿದೆ ಎಂದರು. ಎಸ್‌ಎಸ್‌ಕೆ ಸಮಾಜ ತುಂಬಾ ಬಲಿಷ್ಠವಾದ ಸಮಾಜವಾಗಿದ್ದು ಆರ್ಥಿಕವಾಗಿ, ಸಾಮಾಜಿಕವಾಗಿ ತುಂಬಾ ಬೆಳೆದಿದೆ.
ಆದರೆ ಅವರಲ್ಲಿ ಶಿಕ್ಷಣದ ಕೊರತೆ ಕಾಣುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಸಮಾಜದವರು ಇನ್ನಾದರೂ ಮುಂದಾಗಬೇಕೆಂದರು. ಇಂದು ದೇಶ ಕಷ್ಟದಲ್ಲಿದೆ ನೆರೆಯ ಪಾಕಿಸ್ತಾನಿಗಳು ದೇಶದ ಸೈನಿಕರ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದು ಈ ಕುರಿತುಎಲ್ಲರೂ ಜಾಗೃತಗೊಳ್ಳುವುದು ಅವಶ್ಯ ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಈ ಹಿಂದೆ ಸಾಮೂಹಿಕ ವಿವಾಹ ಸಮಾರಂಭಗಳನ್ನು ಮಾಡಲಾಗುತ್ತಿತ್ತು, ಆದರೆ ಇದೀಗ ಸಾಮೂಹಿಕ ಉಪನಯನ ಮಾಡುವುದರ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು.
ಸಮಾಜ ಸಂಘಟನೆ, ಒಂದುಗೂಡಿಸುವುದು ಇಂತಹ ಕಾರ್ಯಗಳ ಮೂಲಕ ನೆರವೇರಿಸಬೇಕು. ಸಮಾಜದ ಅಭಿವೃದ್ಧಿಗೆ ಬಿಜೆಪಿ ಸದಾ ಸಹಾಯ-ಸಹಕಾರ ನೀಡಿದ್ದು ಈಗಾಗಲೇ ಎರಡು ಪ್ರದೇಶಗಳಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಲಾಗಿದ್ದು,
ಶಬರಿ ನಗರದಲ್ಲಿ ನೀಡಿದ್ದ 38 ಗುಂಠೆ ಜಾಗದಲ್ಲಿ ಈಗಾಗಲೇ ಸಮಾಜದವರು ಭವ್ಯ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ ಎಂದರು. ಇದಕ್ಕೂ ಪೂರ್ವದಲ್ಲಿ ಮಂಡಳದಿಂದ ಸುಮಾರು 175 ಮಕ್ಕಳಿಗೆ ಸಾಮೂಹಿಕ ಉಪನಯನ ಮಾಡಲಾಯಿತು. ಮಂಡಳದ ಹಾಗೂ ಕಾರ್ಯಕ್ರಮಕ್ಕೆ ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು.
ಮಂಡಳದ ಅಧ್ಯಕ್ಷ ರಾಜೇಶ ಜರತಾರಘರ ಅಧ್ಯಕ್ಷತೆ ವಹಿಸಿದ್ದರು. ಮಹಾಪೌರ ಡಿ.ಕೆ.ಚವ್ಹಾಣ, ಎಫ್.ಕೆ.ದಲಬಂಜನ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಬಿ.ಎನ್.ಪವಾರ, ನಾಗೇಶ ಕಲುರ್ಗಿ, ಸಾವಿತ್ರಿಬಾಯಿ ಬದ್ದಿ, ಬಿ.ಎನ್.ಪವಾರ, ಎನ್.ಆರ್.ಮಿಸ್ಕಿನ್, ಎಸ್.ಕೆ.ಬದ್ದಿ, ಆರ್.ಜಿ.ಮಗಜಿಕೊಂಡಿ ಇದ್ದರು.