ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಅವರು ತಮ್ಮ ಅಯೋಧ್ಯೆ ಪುಸ್ತಕದಲ್ಲಿ ಹಿಂದುತ್ವವನ್ನು ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಜತೆ ಹೋಲಿಕೆ ಮಾಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಏತನ್ಮಧ್ಯೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರ ನೂತನ ಪುಸ್ತಕದಲ್ಲಿ ಮುಂಬಯಿ ದಾಳಿಯ ನಂತರ ಯುಪಿಎ-1 ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರಶ್ನಿಸಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ:ಮೈಸೂರು: ಸೂಯೆಜ್ ಫಾರಂನಲ್ಲಿ ಮೊಸಳೆ ಪ್ರತ್ಯಕ್ಷ. ಸ್ಥಳೀಯರಲ್ಲಿ ಆತಂಕ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಬರೆದ ನೂತನ ಪುಸ್ತಕ ಡಿಸೆಂಬರ್ 4ರಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಕುತೂಹಲದ ವಿಷಯವೆಂದರೆ ಮುಂಬಯಿ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳುತ್ತಿರುವುದು ಕಾಕತಾಳೀಯವಾಗಿದೆ ಎಂದು ವರದಿ ತಿಳಿಸಿದೆ.
ನೂರಾರು ಅಮಾಯಕರನ್ನು ಬಲಿ ಪಡೆದ ಮುಂಬಯಿ ದಾಳಿ ಘಟನೆಯ ಬಗ್ಗೆ ಧರ್ಮಭೀತಿ ಪಡುವಂತಹದ್ದೇನಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಸಂಯಮ ವಹಿಸುವುದು ಸಾಮರ್ಥ್ಯದ ಲಕ್ಷಣವಲ್ಲ. ಇದೊಂದು ದೌರ್ಬಲ್ಯದ ಸಂಕೇತವಾಗಿದೆ ಎಂದು ತಿವಾರಿ ಬಿಡುಗಡೆಗೊಳ್ಳಲಿರುವ ಪುಸ್ತಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದ ಬಗ್ಗೆ ಆರೋಪಿಸಿದ್ದಾರೆ.
ಕ್ರಮ ತೆಗೆದುಕೊಳ್ಳಬೇಕಾದ ಸಂದರ್ಭ ಬಂದಾಗ ಶಬ್ದಕ್ಕಿಂತ ಹೆಚ್ಚಾಗಿ ಮಾತನಾಡಬೇಕಾಗುತ್ತದೆ. ಆ ನೆಲೆಯಲ್ಲಿ 26/11 ಘಟನೆ ಕೂಡಾ ಆ ಸಂದರ್ಭದಲ್ಲಿ ಒಂದಾಗಿತ್ತು. 9/11 ದಾಳಿ ನಡೆದ ನಂತರ ಭಾರತವೂ ಕ್ಷಿಪ್ರವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ತಿವಾರಿ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ.
“ನನ್ನ ನಾಲ್ಕನೇಯ ಪುಸ್ತಕ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ. 10 Flash Points; 20 Years – National Security Situations that Impacted India ಪುಸ್ತಕ ಡಿಸೆಂಬರ್ 2ರಂದು ಬಿಡುಗಡೆಗೊಳ್ಳಲಿದೆ” ಎಂದು ಮನೀಶ್ ತಿವಾರಿ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯುಪಿಎ-2 ಸರ್ಕಾರದಲ್ಲಿ ಸಚಿವರಾಗಿದ್ದ ಮನೀಶ್ ತಿವಾರಿ ಅವರು ತಮ್ಮ ಪುಸ್ತಕದಲ್ಲಿ, ಮುಂಬಯಿ ಮೇಲೆ ದಾಳಿ ನಡೆದ ನಂತರ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಭಾರತ ಸಂಯಮವನ್ನು ಪ್ರದರ್ಶಿಸಿತ್ತು. ಇದು ನಮ್ಮ ಸಾಮರ್ಥ್ಯದ ಲಕ್ಷಣವಲ್ಲ, ದೌರ್ಬಲ್ಯದ ಸಂಕೇತ ಎಂದು ಟೀಕಿಸಿದ್ದಾರೆ.