ಲಕ್ನೋ: ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ನಂತರ, ಆಕೆಯ ಕುಟುಂಬವು ಆಕೆಯ ಗಂಡನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಸೋಮವಾರ ತಡರಾತ್ರಿ(ಮಾ.18 ರಂದು) ಪ್ರಯಾಗರಾಜ್‌ನ ಮುತ್ತಿಗಂಜ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಅಂಶಿಕಾ ಕೇಸರವಾಣಿ ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಅಂಶಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಮನೆಯವರಿಗೆ ಅತ್ತೆ – ಮಾವ ಕರೆ ಮಾಡಿ ತಿಳಿಸಿದ್ದಾರೆ. ಆಘಾತದಿಂದ ಮಹಿಳೆಯ ಕುಟುಂಬಸ್ಥರು ಅಂಶಿಕಾಳ ಗಂಡನ ಮನೆಗೆ ತೆರಳಿದ್ದಾರೆ. ಈ ವೇಳೆ ಮೃತ ಮಹಿಳೆಯ ಕುಟುಂಬಸ್ಥರು ಅತ್ತೆ – ಮಾವನ ಬಳಿ ವಾಗ್ವಾದಕ್ಕೆ ಇಳಿದಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ, ನಮ್ಮ ಮಗಳು ಪ್ರಾಣ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಅತ್ತೆ – ಮಾವನನ್ನು ಕೋಣೆಯೊಂದರಲ್ಲಿ ಬಂಧಿಯಾಗಿಸಿ, ಹೊರಗೆ ಬಂದು ಮನೆಗೆ ಬೆಂಕಿ ಇಟ್ಟಿದ್ದಾರೆ.
ಇದರಿಂದ ಬೆಂಕಿ ಎಲ್ಲೆಡೆ ಹಬ್ಬಿ ಕೋಣೆಯೊಳಗಿದ್ದ ಮೃತ ಮಹಿಳೆಯ ಅತ್ತೆ – ಮಾವ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಕುಟುಂಬಸ್ಥರು ಅಂಶಿಕಾ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಬರುವ ವೇಳೆ ಎರಡೂ ಕಡೆಯವರು ವಾಗ್ವಾದದಲ್ಲಿದ್ದರು. ಈ ಜಗಳದ ನಡುವೆಯೇ ಮಹಿಳೆಯ ಮನೆಯವರು ಮನೆಗೆ ಬೆಂಕಿ ಇಟ್ಟಿದ್ದಾರೆ.
ಅಗ್ನಿಶಾಮಕ ದಳದವರು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬೆಂಕಿಯನ್ನು ನಂದಿಸುತ್ತಿದ್ದಂತೆ, ಇಡೀ ಮನೆಯನ್ನು ಹುಡುಕಾಡಿದ್ದಾರೆ. ಕೊನೆಗೆ ಎರಡು ಶವಗಳನ್ನು ಹೊರತೆಗೆದಿದ್ದಾರೆ. ಅಗ್ನಿಶಾಮಕ ದಳದವರು ಐವರನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ರಾಜೇಂದ್ರ ಕೇಸರವಾಣಿ(ಮಾವ) – ಶೋಭಾ ದೇವಿ(ಅತ್ತೆ) ಎಂದು ಗುರುತಿಸಲಾಗಿದೆ.
13 ಫೆಬ್ರವರಿ 2023 ರಂದು ಪಶ್ಚಿಲ ಕೇಸರವಾಣಿ ಜೊತೆ ಮುತ್ತಿಗಂಜ್‌ನ ಅಂಶಿಕಾ ವಿವಾಹವಾಗಿತ್ತು.