ಮುಂಬಯಿ: ಪ್ರೀಮಿಯರ್ ಲೀಗ್ ನಲ್ಲಿ ಸತತ 5 ಸೋಲುಗಳಿಂದ ದಿಕ್ಕೆಟ್ಟಿದ್ದ ಆರ್ ಸಿಬಿ ವನಿತಾ ತಂಡ ಯುಪಿ ವಾರಿಯರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಜಯದ ನಗು ಬೀರುವಲ್ಲಿ ಯಶಸ್ವಿಯಾಗಿದೆ.
ಸ್ಮತಿ ಮಂಧನಾ ಬಳಗ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿತು. ಎಸ್ ಡಿವೈನ್ ಅವರು ಮೊದಲ ಓವರ್ ನಲ್ಲೆ ನಾಯಕಿ ಹೀಲೇ ಮತ್ತು ದೇವಿಕಾ ವೈದ್ಯ ಅವರ ರೂಪದಲ್ಲಿ ಪ್ರಮುಖ 2 ವಿಕೆಟ್ ಕಬಳಿಸಿ ಯುಪಿ ವಾರಿಯರ್ಸ್ ಗೆ ಭಾರಿ ಶಾಕ್ ನೀಡಿದರು. 5 ರನ್ ಆಗುವಷ್ಟರಲ್ಲಿ ತಾಲಿಯಾ ಮೆಕ್‌ಗ್ರಾತ್ ಅವರ ರೂಪದಲ್ಲಿ 3 ನೇ ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಕಿರಣ್ ನವಗಿರೆ 22 ರನ್ ಮತ್ತು ಗ್ರೇಸ್ ಹ್ಯಾರಿಸ್ 46 ರನ್ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. ದೀಪ್ತಿ ಶರ್ಮಾ 22 ಮತ್ತು ಎಕ್ಲೆಸ್ಟೋನ್ 12 ರನ್ ಗಳಿಸಿದರು. 19.3 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟಾಯಿತು. ಎಲ್ಲಿಸ್ ಪೆರ್ರಿ3 ವಿಕೆಟ್ ಪಡೆದು ಗಮನ ಸೆಳೆದರು. ಉತ್ತಮ ಬೌಲಿಂಗ್ ದಾಳಿ ನಡೆಸಿ ಎಸ್ ಡಿವೈನ್ ಮತ್ತು ಆಶಾ ಶೋಬನಾ ತಲಾ 2 ವಿಕೆಟ್ ಪಡೆದರು. ಮೇಗನ್ ಶುಟ್ ಮತ್ತು ಶ್ರೇಯಾಂಕ ಪಾಟೀಲ್ ತಲಾ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಆರ್ ಸಿಬಿ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಗೆಲುವಿನ ಸಂಭ್ರಮದಲ್ಲಿ ತೇಲಿತು. 14 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಸ್ಮತಿ ಮಂಧನಾ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದರು. ಸೋಫಿ 14 ರನ್ , ಹೀದರ್ ನೈಟ್ 24, ಭರ್ಜರಿ ಆಟವಾಡಿದ ಕನಿಕಾ ಅಹುಜಾ 46 ರನ್ ಗಳಿಸಿ ಔಟಾದರು. ರಿಚಾ ಘೋಷ್ ಔಟಾಗದೆ 31 ಮತ್ತುಶ್ರೇಯಾಂಕಾ ಪಾಟೀಲ್ ಔಟಾಗದೆ 5 ರನ್ ಕೊಡುಗೆ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.