ಉತ್ತರಪ್ರದೇಶ: ಶಾಲೆಗಳಲ್ಲಿ ಶಿಕ್ಷಕರನ್ನು ದೇವರ ಸಮಾನ ರೂಪದಲ್ಲಿ ನೋಡುತ್ತಾರೆ, ಅಲ್ಲದೆ ವಿದ್ಯಾರ್ಥಿಗಳಿಗೆ ಗುರುಗಳಾಗಿರುವ ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಣೆ ನೀಡುತ್ತಾರೆ, ಯಾವುದು ತಪ್ಪು ಯಾವುದು ಸರಿ ಎಂಬುದನ್ನು ಮನೆಯಲ್ಲಿ ಪೋಷಕರು ಬಿಟ್ಟರೆ ಶಾಲೆಯಲ್ಲಿ ಶಿಕ್ಷಕರೇ ಹೇಳುವುದು ಶಿಕ್ಷಣದ ಕ್ರಮ ಆದರೆ ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿಗೆ ಶಾಲೆಯ ಶಿಕ್ಷಕಿಯೇ ಮುಂದೆ ನಿಂತು ಇತರ ವಿದ್ಯಾರ್ಥಿಗಳಿಂದ ಕಪಾಳ ಮೋಕ್ಷ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಇದನ್ನು ಕಂಡಾಗ ಶಾಲೆಯಲ್ಲಿ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ ಎಂದು ಆಲೋಚನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಶಾಲಾ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಇತರ ವಿಧ್ಯಾರ್ಥಿಗಳಿಂದ ಕಪಾಳಮೋಕ್ಷ ಮಾಡುವಂತೆ ಹೇಳುತ್ತಿರುವ ವಿಡಿಯೋ ವೊಂದು ವೈರಲ್ ಆಗುತ್ತಿದ್ದು ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
ಜಿತ್ನೆ ಭಿ ಮೊಹಮ್ಮದನ್ ಬಚ್ಚೆ ಹೈ… ಎಂದು ಹೇಳುತ್ತಿರುವ ಶಿಕ್ಷಕಿ ವಿದ್ಯಾರ್ಥಿಗೆ ತರಗತಿಯಲ್ಲಿರುವ ಇತರ ವಿದ್ಯಾರ್ಥಿಗಳಿಂದ ಹೊಡೆಯುವಂತೆ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ವೈರಲ್ ಆದ ನಂತರ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದು, ವಿಡಿಯೋವನ್ನು ತನಿಖೆ ಮಾಡಲಾಗುತ್ತಿದೆ ಎಂದು ಮನ್ಸೂರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಒಂದು ಕಡೆ ವಿದ್ಯಾರ್ಥಿಗೆ ಮಗ್ಗಿ ಕಂಠಪಾಠವಿಲ್ಲ ಎಂಬ ಕಾರಣಕ್ಕೆ ಇತರ ವಿದ್ಯಾರ್ಥಿಗಳಿಂದ ಬಾಲಕನಿಗೆ ಕಪಾಳಮೋಕ್ಷ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದ್ದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ‘ಮುಸ್ಲಿಂ ವಿದ್ಯಾರ್ಥಿಗಳ ತಾಯಂದಿರು ತಮ್ಮ ಮಕ್ಕಳನ್ನು ಓದಿನ ಕಡೆಗೆ ಗಮನ ಹರಿಸದೇ ಇರುವುದರಿಂದ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿಯುತ್ತಾರೆ ಹಾಗಾಗಿ ವಿದ್ಯಾಭ್ಯಾಸದಲ್ಲಿ ಮುಂದೆ ಬರಲಿ ಎಂಬ ಕಾರಣಕ್ಕೆ ಇತರ ವಿದ್ಯಾರ್ಥಿಗಳಿಂದ ಹೊಡೆಸಿರುವುದು ಎಂದು ಮಹಿಳಾ ಶಿಕ್ಷಕಿ ಹೇಳಿದ್ದಾರೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಯ ತಂದೆ ಹೇಳಿಕೆ ನೀಡಿದ್ದು ವಿಡಿಯೋ ವೈರಲ್ ಆಗಿರುವ ವಿಚಾರದ ಕುರಿತು ಶಿಕ್ಷಕಿಯ ವಿರುದ್ಧ ದೂರು ನೀಡಿಲ್ಲ ಬದಲಾಗಿ ಆ ಶಾಲೆಯಿಂದ ನನ್ನ ಮಗನ ದಾಖಲಾತಿ ರದ್ದುಪಡಿಸಿ ಶಾಲೆಗೆ ಕಟ್ಟಿದ ಶುಲ್ಕವನ್ನು ಹಿಂಪಡೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ.