ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಕ್ರಿಮಿನಲ್ ಗಳು ರಾಜಾರೋಷವಾಗಿ ಎಲ್ಲೆಂದರಲ್ಲಿ ತಿರುಗಾಡುತ್ತ, ತಮಗೆ ಏನು ಬೇಕು ಅದನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದ ಬೆನ್ನಲ್ಲೇ ಉತ್ತರಪ್ರದೇಶ ಪೊಲೀಸರು ಅಂಕಿಅಂಶ ಸಹಿತ ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಿಯಾಂಕಾ ಆರೋಪಿಸಿದ ಒಂದು ಗಂಟೆಯೊಳಗೆ ಉತ್ತರಪ್ರದೇಶ ಪೊಲೀಸರು, ರಾಜ್ಯದಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿರುವ ಅಂಕಿ ಅಂಶವನ್ನು ನೀಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಯುಪಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. 2 ವರ್ಷಗಳ ಅವಧಿಯಲ್ಲಿ 9,225 ಕ್ರಿಮಿನಲ್ಸ್ ಗಳನ್ನು ಬಂಧಿಸಲಾಗಿದೆ. 81 ನಟೋರಿಯಸ್ ಕ್ರಿಮಿನಲ್ ಗಳನ್ನು ಹತ್ಯೆಗೈಯಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಂದಾಜು 2 ಬಿಲಿಯನ್ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೇ ದರೋಡೆ, ಕೊಲೆ ಮತ್ತು ಅಪಹರಣ ಘಟನೆಗಳ ಪ್ರಮಾಣ ಇಳಿಕೆ ಕಂಡಿದೆ ಎಂದು ಯುಪಿ ಪೊಲೀಸರು ಹಿಂದಿಯಲ್ಲಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಕ್ರಿಮಿನಲ್ಸ್ ಗಳಿಗೆ ಮುಕ್ತ ವಾತಾವರಣ ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಯಾಗಿ ಉತ್ತರಪ್ರದೇಶ ಪೊಲೀಸರು ಈ ಪ್ರತಿಕ್ರಿಯೆ ನೀಡಿದ್ದಾರೆ.