ಲಕ್ನೋ: ದೇವಸ್ಥಾನ ನಿರ್ಮಾಣದ ಕಾಮಗಾರಿ ಸಂದರ್ಭದಲ್ಲಿ ಮೊಘಲರ ಕಾಲದ 400 ನಾಣ್ಯಗಳು ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಸಹರಾನ್ ಪುರ್ ನಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:VIRAL: ಮದುವೆ ದಿನ ಪರಾರಿಯಾಗಲು ಯತ್ನಿಸಿದ ವರ: 20ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು
ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಜೈನ್ ಅವರು ನೀಡಿರುವ ಮಾಹಿತಿ ಪ್ರಕಾರ, ಸಹರಾನ್ ಪುರದ ಹುಸೈನ್ ಪುರ ಗ್ರಾಮದ ಸತಿ ಧಾಮ್ ದೇವಾಲಯದ ಆವರಣ ಗೋಡೆಯನ್ನು ತೆರವುಗೊಳಿಸಿ, ಮಣ್ಣನ್ನು ಅಗೆಯುತ್ತಿದ್ದ ವೇಳೆ ಈ ನಾಣ್ಯಗಳು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸುಮಾರು 400 ನಾಣ್ಯಗಳನ್ನು ವಶಕ್ಕೆ ಪಡೆದಿರುವುದಾಗಿ ಪಿಟಿಐ ವರದಿ ಮಾಡಿದೆ. ಮೊಘಲರ ಕಾಲದಲ್ಲಿ ಬಳಸುತ್ತಿದ್ದ ಈ ನಾಣ್ಯದಲ್ಲಿ ಅರೆಬಿಕ್ ಭಾಷೆಯಲ್ಲಿ ಲಿಪಿ ಇರುವುದಾಗಿ ಜೈನ್ ವಿವರಿಸಿದ್ದಾರೆ.
ಪುರಾತತ್ವ ಶಾಸ್ತ್ರ ಇಲಾಖೆ ಕೂಡಾ ನಾಣ್ಯಗಳನ್ನು ಪರಿಶೀಲಿಸುತ್ತಿದ್ದು, ಯಾವ ಲೋಹವನ್ನು ಬಳಸಿ ನಾಣ್ಯಗಳನ್ನು ತಯಾರಿಸಲಾಗಿದೆ ಎಂಬುದನ್ನು ಖಚಿತಪಡಿಸಲಿದೆ. ಪತ್ತೆಯಾಗಿರುವ ನಾಣ್ಯಗಳು ಅಂದಾಜು 350 ವರ್ಷಗಳ ಹಿಂದಿನದ್ದಾಗಿದೆ. ಪ್ರತಿ ನಾಣ್ಯವು 11 ಗ್ರಾಮ್ ತೂಕವಿದೆ.
ವರದಿಯ ಪ್ರಕಾರ, ಪ್ರತಿ ನಾಣ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ 3,500 ರೂಪಾಯಿ ಎಂದು ತಿಳಿಸಿದೆ. ಹುಸೈನ್ ಪುರ್ ನಲ್ಲಿ ದೊರೆತ ನಾಣ್ಯಗಳು ಮೊಘಲ್ ದೊರೆ ಶಾ ಅಲಾಂ II ಕಾಲಘಟ್ಟದ್ದಾಗಿದೆ. ಇದರಲ್ಲಿರುವುದು ಪಾರ್ಸಿ ಭಾಷೆಯ ಲಿಪಿಯಾಗಿದೆ ಎಂದು ಇತಿಹಾಸಕಾರ ರಾಜೀವ್ ಉಪಾಧ್ಯಾಯ ತಿಳಿಸಿದ್ದಾರೆ.