ಹುಬ್ಬಳ್ಳಿ: ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದು, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಉತ್ತರ ಪ್ರದೇಶ ಹಾಗೂ ತಮಿಳುನಾಡು ಸರ್ಕಾರ ಕೈಗೊಂಡ ನಿರ್ಧಾರದಂತೆ ಜ್ಯದ ಎಲ್ಲ ರೈತರ ಸಹಕಾರಿ ಹಾಗೂ ರಾಷ್ಟ್ರಿಕೃತ ಬ್ಯಾಂಕ್‌ಗಳಲ್ಲಿರುವ ಕೃಷಿ ಸಾಲಮನ್ನಾ ಮಾಡಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಬಜೆಟ್ ಅಧಿವೇಶನದ ವೇಳೆ ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ರೈತರ ಸಾಲಮನ್ನಾ ಮಾಡುವಂತೆ ಬಿಗಿಪಟ್ಟು ಹಿಡಿದಿದ್ದೆವು. ಆದರೆ, ಆಗ ಸರ್ಕಾರ ಮಣಿದಿರಲಿಲ್ಲ.
ಹೀಗಾಗಿ ಈಗಲಾದರೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೈಗೊಂಡ ದಿಟ್ಟ ನಿರ್ಧಾರದಂತೆ ರಾಜ್ಯದಲ್ಲಿರುವ ಎಲ್ಲ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಉತ್ತರ ಪ್ರದೇಶ ಸರ್ಕಾರ ರೈತರ ಸಾಲಮನ್ನಾ ಮಾಡಿದರೆ ಮುಂದೆ ನೋಡೋಣ ಎಂದು ಸದನದಲ್ಲಿ ತಾವು ಹೇಳಿರುವುದರಿಂದ, ಕೂಡಲೇ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಅಲ್ಲದೇ, ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಯಾವುದೇ ಕಾರಣಕ್ಕೂ ಎದುರು ನೋಡಬಾರದು.
ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದ ರಾಜ್ಯಕ್ಕೆ ಸ್ವಲ್ಪ ಹೊರೆಯಾದರೂ ಪರವಾಗಿಲ್ಲ. ಈ ಕುರಿತು ದಿಟ್ಟ ನಿರ್ಧಾರ ಕೈಗೊಳ್ಳಬೇಕು.
ತಮಿಳುನಾಡು ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡುವಂತೆ ಅಲ್ಲಿನ ಹೈಕೋರ್ಟ್ ಪೀಠ ಆದೇಶ ನೀಡಿರುವುದರಿಂದ ಅಲ್ಲಿನ ರಾಜ್ಯ ಸರ್ಕಾರ ಕೂಡ ಕೃಷಿ ಸಾಲಮನ್ನಾ ಮಾಡಲು ಮುಂದಾಗಿದೆ. ರಾಜ್ಯವೂ ಆ ನಿಟ್ಟಿನಲ್ಲಿ ಹೆಜ್ಜೆ ಹಾಕುವ ಮೂಲಕ ರೈತರೊಂದಿಗೆ ಸರ್ಕಾರವಿದೆ ಎಂಬ ಸಂದೇಶ ಸಾರುವ ಅನಿವಾರ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.