ಲಕ್ನೋ: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶಿವಭಕ್ತನೊಬ್ಬ “ತನಗೆ ವಿವಾಹವಾಗಲು ವಧು” ಸಿಗಬೇಕೆಂದು ಪ್ರತಿದಿನ ಶಿವ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದ. ಆದರೆ ಶ್ರಾವಣ ಮಾಸ ಮುಗಿದರೂ ವಧು ಸಿಗದಿದ್ದಾಗ ಆತ ಶಿವಲಿಂಗವನ್ನೇ ಕದ್ದಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:INDIA v/s Bharat: ಈಗ ಪ್ರೈಮ್ ಮಿನಿಸ್ಟರ್ ಆಫ್ ಭಾರತ್…ಜಾಹೀರಾತು ವಿವಾದ
ಕೌಶಂಬಿ ಜಿಲ್ಲೆಯ ಪುರಾತನ ಭೈರವ್ ಬಾಬಾ ಶಿವ ದೇವಸ್ಥಾನಕ್ಕೆ ಚೋಟು ಎಂಬಾತ ತನಗೆ ವಧು ಸಿಗಬೇಕೆಂದು ಪ್ರಾರ್ಥಿಸಿ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದ. ಏತನ್ಮಧ್ಯೆ ಶ್ರಾವಣ ಮಾಸದ ಕೊನೆಯ ದಿನವಾದ ಆಗಸ್ಟ್ 31ರಂದು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಲಿಂಗ ನಾಪತ್ತೆಯಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುಮಾರು ಹತ್ತು ಗಂಟೆಗಳ ಶೋಧ ಕಾರ್ಯದ ನಂತರ ಶಂಕಿತ ಆರೋಪಿ ಚೋಟುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಬೇಡಿಕೆಯನ್ನು ದೇವರು ಈಡೇರಿಸದಿದ್ದಕ್ಕೆ ಲಿಂಗವನ್ನು ಕದ್ದು, ದೇವಾಲಯದಿಂದ ಅನತಿ ದೂರದಲ್ಲಿ ಅಡಗಿಸಿ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದ ಎಂದು ವರದಿ ವಿವರಿಸಿದೆ.
ಶಿವಲಿಂಗವನ್ನು ಮರಳಿ ಪಡೆದ ನಂತರ ಪೊಲೀಸರು ಚೋಟುವನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ. ಈತ ವಧುವಿಗಾಗಿ ಪ್ರತಿದಿನ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದ. ಆದರೆ ವಧು ಸಿಗದ ಪರಿಣಾಮ ಆಕ್ರೋಶಗೊಂಡು ಶಿವಲಿಂಗವನ್ನೇ ಕದ್ದಿರುವುದಾಗಿ ಇನ್ಸ್ ಪೆಕ್ಟರ್ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.