ವಾರಾಣಸಿ: ‘ಬ್ಯಾಂಕ್‌ಗಳಿಗೆ ಕೋಟಿ ಕೋಟಿ ಪಂಗನಾಮ, ಬ್ಯಾಂಕ್ ಸಿಬ್ಬಂದಿಯಿಂದಲೇ ವಂಚನೆ, ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಹಣ ವಸೂಲಿ, ಮೋಸ’ ಇಂಥ ಪ್ರಕರಣಗಳು ಸರ್ವೇಸಾಮಾನ್ಯ. ಆದರೆ ದೇಶದ ಪ್ರತಿಷ್ಠಿತ ಬ್ಯಾಂಕ್ ನ ಹೆಸರಲ್ಲಿ ನಕಲಿ ಶಾಖೆಯನ್ನೇ ಆರಂಭಿಸಿ ವಂಚಿಸಲೆತ್ನಿಸಿ ಸಿಕ್ಕಿಬಿದ್ದ ಅಪರೂಪದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.
ವ್ಯಕ್ತಿಯೊಬ್ಬ ಬಾಲಿಯಾ ಜಿಲ್ಲೆಯಲ್ಲಿ ‘ಕರ್ಣಾಟಕ ಬ್ಯಾಂಕ್, ಮುಲಾಯಂ ನಗರ’ ಹೆಸರಿನಲ್ಲಿ ನಕಲಿ ಶಾಖೆ ಆರಂಭಿಸಿ ಸಿಕ್ಕಿಬಿದ್ದಿದ್ದಾನೆ. ಬ್ಯಾಂಕ್ ಹೆಸರಿನಲ್ಲಿ ಸಾಕಷ್ಟು ಗ್ರಾಹಕರಿಂದ ಭಾರೀ ಮೊತ್ತದ ಹಣವನ್ನು ಠೇವಣಿ ರೂಪದಲ್ಲಿ ಸ್ವೀಕರಿಸುತ್ತಿದ್ದ. ವಂಚನೆಗೆ ಹೊಸ ಮಾರ್ಗ ಕಂಡುಕೊಂಡಿದ್ದ ಈ ವ್ಯಕ್ತಿಯ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಆಫಕ್ ಅಹ್ಮದ್ ಉತ್ತರ ಪ್ರದೇಶದ ಬದಾಯುನ್ ಜಿಲ್ಲೆಯವನು. ದಿಲ್ಲಿ ಶಾಖೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಬಿಬಿಎಚ್ ಉಪಾಧ್ಯಾಯ ಎನ್ನುವವರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಶಾಖೆ ಮೇಲೆ ದಾಳಿ ನಡೆಸಿದ್ದಾರೆ. ಆರ್‌ಬಿಐ ಲೈಸೆನ್ಸ್ ಪ್ರತಿ ನೀಡುವಂತೆ ಉಪಾಧ್ಯಾಯ ಕೇಳಿದ್ದು, ತಡಕಾಡಿ ದಾಖಲೆಗಳಿಲ್ಲ ಎಂದಾಗ ಆಫಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
15 ಖಾತೆಯಿಂದ 1.37 ಲಕ್ಷ ರೂ.: ಪೊಲೀಸರು ನೀಡಿರುವ ಮಾಹಿತಿಯಂತೆ, ಈಗಾಗಲೇ 15 ಉಳಿತಾಯ ಖಾತೆಗಳನ್ನು ತೆರೆದಿದ್ದ ಗ್ರಾಹಕರಿಂದ ಒಟ್ಟು 1.37 ಲಕ್ಷ ರೂ.ಗಳನ್ನು ಸ್ಥಿರ ಠೇವಣಿಯಾಗಿ ಸ್ವೀಕರಿಸಿದ್ದ. ಪ್ರತಿ ಖಾತೆಗೆ 1000 ರೂ. ಮಿನಿಮಮ್ ಬ್ಯಾಲೆನ್ಸ್ ಪಡೆಯಲಾಗಿದ್ದು, ಫಿಕ್ಸೆಡ್ ಡಿಪಾಸಿಟ್ ಆಗಿ ಕೆಲವರಿಂದ 30,000ದಿಂದ 70,000 ರೂ. ಪಡೆದುಕೊಳ್ಳಲಾಗಿದೆ. ಅಲ್ಲದೇ, ಕರ್ಣಾಟಕ ಬ್ಯಾಂಕ್ ಅಲ್ಲ ಎಂದು ಎಲ್ಲಿಯೂ ಅನುಮಾನ ಬಾರದಂತೆ ಐಡಿ, ಹೊಸ ಖಾತೆಗೆ ಅರ್ಜಿ ನಮೂನೆ, ಪಾಸ್‌ಬುಕ್‌ಗಳನ್ನು ಮುದ್ರಿಸಿದ್ದ. ಇದೀಗ ಶಾಖೆಯಲ್ಲಿದ್ದ ಭಾರೀ ಪ್ರಮಾಣದ ಸ್ಟೇಷನರಿ, 3 ಕಂಪ್ಯೂಟರ್, ಲ್ಯಾಪ್‌ಟಾಪ್, ಪೀಠೊಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಾಖೆಗಾಗಿ ಪಡೆದಿದ್ದ ಸ್ಥಳಕ್ಕೆ ಪ್ರತಿ ತಿಂಗಳು 32 ಸಾವಿರ ಬಾಡಿಗೆ ನೀಡಲು ಒಪ್ಪಂದ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಐವರು ಬ್ಯಾಂಕ್ ಸಿಬ್ಬಂದಿಗೆ ತಲಾ 5 ಸಾವಿರ ರೂ. ನೀಡುವುದಾಗಿ ನೇಮಕ ಮಾಡಿಕೊಂಡಿದ್ದ.
ಹೆಸರು, ತವರು ಎಲ್ಲವೂ ನಕಲಿ
ಆಫಕ್ ಅಂತಿಂಥ ಆಸಾಮಿಯಲ್ಲ. ಶಾಖೆಯ ವ್ಯವಸ್ಥಾಪಕ ನಾನೇ ಎಂದು ಹೇಳಿಕೊಂಡಿದ್ದ ಈತ ತನ್ನ ಹೆಸರು ವಿನೋದ್ ಕುಮಾರ್ ಕಾಂಬ್ಳಿ ಎಂದು ಹೇಳಿಕೊಂಡಿದ್ದ. ಆಧಾರ್ ಸೇರಿದಂತೆ ಎಲ್ಲಾ ಐಡಿಗಳನ್ನೂ ಇದೇ ಹೆಸರಿನಲ್ಲಿ ಹೊಂದಿದ್ದ. ಅಲ್ಲದೇ, ತನ್ನ ಮೂಲ ಪಶ್ವಿಮ ಮುಂಬೈ ಎಂದು ಹೇಳಿ ಕೊಂಡಿದ್ದಲ್ಲದೇ, ಕ್ರಿಕೆಟಿಗ ವಿನೋದ್ ಕಾಂಬ್ಳಿ ನನಗೆ ಸ್ಫೂರ್ತಿ ಎಂದೂ ಬಾಯಿಬಿಟ್ಟಿದ್ದಾನೆ.