ಉತ್ತರಪ್ರದೇಶ(ಷಹಜಹಾನ್ ಪುರ್): ಗರ್ಭಿಣಿಯಾಗಿದ್ದ 14 ವರ್ಷದ ಅಪ್ರಾಪ್ತ ಮಗಳನ್ನು ತಂದೆ ಹಾಗೂ ಆಕೆಯ ಹಿರಿಯ ಅಣ್ಣ ಜತೆಯಾಗಿ ಸೇರಿಕೊಂಡು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗರ್ಭಿಣಿಯಾಗಲು ಕಾರಣ ಯಾರು ಎಂಬುದನ್ನು ಹೇಳಲು ನಿರಾಕರಿಸಿದ್ದಕ್ಕೆ ಈ ಕೊಲೆ ನಡೆದಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದುಲ್ಹಾಪುರ್ ಗ್ರಾದ ಸಿಧೌಲಿ ಪ್ರದೇಶದಲ್ಲಿ ತಲೆಕಡಿಯಲ್ಪಟ್ಟಿದ್ದ ಬಾಲಕಿಯ ಶವ ಪತ್ತೆಯಾಗಿದ್ದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ನ್ಯೂಸ್ ಏಜೆನ್ಸಿ ಪಿಟಿಐಗೆ ತಿಳಿಸಿದ್ದಾರೆ.
ಘಟನೆಯ ತನಿಖೆಯಲ್ಲಿ, 14 ವರ್ಷದ ದಲಿತ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದು, ಆಕೆ ಬೇರೆ ಯಾರದ್ದೋ ಜತೆ ಅಕ್ರಮ ಸಂಬಂಧ ಹೊಂದಿರಬೇಕೆಂದು ಶಂಕಿಸಲಾಗಿದೆ. ಅಲ್ಲದೇ ಇದೊಂದು ಮರ್ಯಾದಾ ಹತ್ಯೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಬಾಲಕಿಯ ತಂದೆಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇದನ್ನೂ ಓದಿ:ಜನಪ್ರತಿನಿಧಿಯಾಗಿ, ಉನ್ನತ ಹುದ್ದೆ ಅಲಂಕರಿಸಿ 20 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ
ಆರೋಪಿಗಳು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಬಾಲಕಿಯನ್ನು ಸೆಪ್ಟೆಂಬರ್ 24ರಂದು ಹತ್ಯೆಗೈಯಲಾಗಿತ್ತು. ಆದರೆ ಕುಟುಂಬದ ಸದಸ್ಯರು ಪೊಲೀಸರನ್ನು ಸಂಪರ್ಕಿಸಿರಲಿಲ್ಲವಾಗಿತ್ತು. ಗರ್ಭಿಣಿಯಾಗಲು ಯಾವ ವ್ಯಕ್ತಿ ಕಾರಣ ಎಂಬುದನ್ನು ಬಹಿರಂಗಪಡಿಸದ ಮಗಳ ಕತ್ತನ್ನು ಕಡಿದು ಹತ್ಯೆಗೈದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ಕೃತ್ಯಕ್ಕೆ ಕಾರಣನಾದ ವ್ಯಕ್ತಿಯ ಜತೆ ವಿವಾಹ ಮಾಡಿಸಲು ಆರೋಪಿ ಬಯಸಿದ್ದ. ಮಗಳ ತಲೆ ಕಡಿದು ಹತ್ಯೆಗೈದ ನಂತರ ಶವವನ್ನು ಸಮೀಪದ ಚರಂಡಿಗೆ ಎಸೆಯಲಾಗಿತ್ತು. ಘಟನೆ ನಂತರ ಸಹೋದರ ಪರಾರಿಯಾಗಿದ್ದು, ತಂದೆಯನ್ನು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.