ಲಕ್ನೋ: ಉತ್ತರಪ್ರದೇಶ ಸರ್ಕಾರ ಎರಡು ಮಕ್ಕಳ ನೀತಿಯನ್ನು ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ಇದೀಗ ಇಬ್ಬರು ಅಥವಾ ಒಂದು ಮಗು ಇರುವ ಕುಟುಂಬಗಳಿಗೆ ಪ್ರೋತ್ಸಾಹ ಧನ ಹಾಗೂ ಸರ್ಕಾರಿ ಸೌಲಭ್ಯ ನೀಡುವ ಬಗ್ಗೆ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:‘ಜೊತೆ ಜೊತೆಯಲಿ’ ಧಾರವಾಹಿಯಿಂದ ಹೊರ ಬಂದ ಮೇಘಾ ಶೆಟ್ಟಿ
ರಾಜ್ಯದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವ ಮುಖ್ಯ ಗುರಿಯೊಂದಿಗೆ ಉತ್ತರಪ್ರದೇಶದ ಕಾನೂನು ಆಯೋಗ ಶುಕ್ರವಾರ ಮಸೂದೆಯ ಮೊದಲ ಕರಡನ್ನು ಬಿಡುಗಡೆಗೊಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಈ ಕಾನೂನು ಕುರಿತು ಸಾರ್ವಜನಿಕರು ಹತ್ತು ದಿನಗಳೊಳಗೆ ತಮ್ಮ ಪ್ರತಿಕ್ರಿಯೆಯನ್ನು ನೀಡುವಂತೆ ಮನವಿ ಮಾಡಿಕೊಂಡಿದೆ ಎಂದು ವರದಿ ವಿವರಿಸಿದೆ.
ಇದಕ್ಕೂ ಮುನ್ನ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, 2021-2030ಕ್ಕೆ ನೂತನ ಜನಸಂಖ್ಯಾ ನೀತಿಯನ್ನು ತಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ತಿಳಿಸಿದ್ದು, ಇದನ್ನು ವಿಶ್ವಜನಸಂಖ್ಯಾ ದಿನವಾದ ಜುಲೈ11ರಂದು ಘೋಷಿಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿದೆ. ಅಷ್ಟೇ ಅಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಕೂಡಾ ಅವಕಾಶ ಇಲ್ಲ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ನಿರ್ಬಂಧ ವಿಧಿಸಲಾಗುವುದು ಎಂದು ವರದಿ ತಿಳಿಸಿದೆ.