ನವದೆಹಲಿ: ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನ ಶೇ.40ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೇ ಮೀಸಲಿಡಲಾಗುವುದು ಎಂದು ಪಕ್ಷದ ಉ.ಪ್ರ. ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಘೋಷಿಸಿದ್ದಾರೆ.
ರಾಜ್ಯದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಿಂದಲೂ ನಾವು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಿದ್ದೇವೆ. ನ.15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಾಂಗ್ರೆಸ್‌ನ ಶೇ. 40ರಷ್ಟು ಟಿಕೆಟ್ ಮಹಿಳೆಯರಿಗೇ ಮೀಸಲು ಎಂದು ಅವರು ತಿಳಿಸಿದ್ದಾರೆ.
ಲಕ್ನೋದಲ್ಲಿ ಮಂಗಳವಾರ ಮಾತನಾಡಿದ ಅವರು, “ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಬೇಕು ಮತ್ತು ನನ್ನೊಂದಿಗೆ ಕೈಜೋಡಿಸಬೇಕು. ನಾವೆಲ್ಲರೂ ಸೇರಿ ಈ ರಾಜ್ಯದ ಹಾಗೂ ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆ ತರೋಣ. ಇಲ್ಲಿ ನಿಮ್ಮನ್ನು ರಕ್ಷಿಸುವವರು ಯಾರೂ ಇಲ್ಲ. ಮಹಿಳೆಯರನ್ನು ರಕ್ಷಿಸುವುದಾಗಿ ಹೇಳುವವರು ತಮಗೆ ತಾವೇ ರಕ್ಷಣೆ ಪಡೆಯುತ್ತಾರೆಯೇ ಹೊರತು ನಿಮ್ಮನ್ನು ರಕ್ಷಿಸಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು
ಪ್ರಿಯಾಂಕಾರದ್ದೇ ನೇತೃತ್ವ:
ಉ.ಪ್ರದೇಶದಲ್ಲಿ ಪ್ರಸ್ತುತ ಪ್ರಿಯಾಂಕಾ ವಾದ್ರಾ ಅವರೇ ಅತ್ಯಂತ ಜನಪ್ರಿಯ ರಾಜಕೀಯ ನಾಯಕಿಯಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್ ಚುನಾವಣಾ ಪ್ರಚಾರದ ನೇತೃತ್ವವನ್ನು ಅವರೇ ವಹಿಸಿಕೊಳ್ಳಲಿದ್ದಾರೆ ಎಂದು ಹೊಸದಾಗಿ ನೇಮಕಗೊಂಡ ಪ್ರಚಾರ ಸಮಿತಿ ಅಧ್ಯಕ್ಷರಾದ ಪಿ.ಎಲ್.ಪೂನಿಯಾ ಹೇಳಿದ್ದಾರೆ.