Advertisement

ಬೆಲೆ ಏರಿಕೆ, ಉದ್ಯೋಗವೇ ಚುನಾವಣ ವಿಷಯ

11:11 PM Feb 17, 2022 | Team Udayavani |

ಉತ್ತರ ಪ್ರದೇಶದ ಏಳು ಹಂತಗಳ ಚುನಾವಣೆಗಳ ಪೈಕಿ ಕಾನ್ಪುರದಲ್ಲಿ ಫೆ.20ರಂದು ಮತದಾನ ನಡೆಯಲಿದೆ. ಅಂದರೆ ಮೂರನೇ ಹಂತದಲ್ಲಿ ಅಲ್ಲಿ ಮತದಾನ ನಡೆಯಲಿದೆ. ಹೇಳಿ ಕೇಳಿ ಅದು ರಾಜ್ಯದ ಮತ್ತು ದೇಶದ ಹಳೆಯ ಕೈಗಾರಿಕ ಪ್ರದೇಶವೂ ಹೌದು. ಇದರ ಹೊರತಾಗಿಯೂ ಅಲ್ಲಿ ಪ್ರಧಾನವಾಗಿ ಕಾಡುತ್ತಿರುವ ವಿಚಾರವೆಂದರೆ ಉದ್ಯೋಗ. ಕೊರೊನಾ ಅಲೆಯ ಮೊದಲ ಮತ್ತು ಎರಡನೇ ಅವಧಿಯಲ್ಲಿ ನೂರಾರು ಮಂದಿ ಯುವಕರು ಈ ಪ್ರದೇಶದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಕಾನ್ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಹತ್ತು ವಿಧಾನಸಭಾ ಕ್ಷೇತ್ರಗಳಿವೆ. ಅದರ ಪೈಕಿ, ಬಿಲೌØರ್‌, ಭಿತೂರ್‌, ಕಲ್ಯಾಣ್‌ಪುರ್‌, ಗೋವಿಂದ ನಗರ, ಕಿದ್ವಾಯಿನಗರ, ಮಹಾ ರಾಜಪುರ, ಘತಮ್‌ಪುರ ಕ್ಷೇತ್ರಗಳಲ್ಲಿ ಸದ್ಯ ಬಿಜೆಪಿ ಶಾಸಕರು ಇದ್ದಾರೆ. ಸಿಸಮೌ ಮತ್ತು ಆರ್ಯನಗರ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಶಾಸಕರು, ಕಾನ್ಪುರ ದಂಡು (ಕಂಟೋನ್‌ಮೆಂಟ್‌)ನಲ್ಲಿ ಕಾಂಗ್ರೆಸ್‌ ಶಾಸಕರು 2017ರ ಚುನಾವಣೆಯಲ್ಲಿ ಗೆದ್ದಿದ್ದರು.

Advertisement

ಬಿಜೆಪಿಯಿಂದ ಗೆದ್ದವರು ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದರೆ ವಿಪಕ್ಷ ಸಮಾಜ ವಾದಿ ಪಕ್ಷ ಮತ್ತು ಕಾಂಗ್ರೆಸ್‌ ಮುಖಂಡರು ನೋಟು ಅಮಾನ್ಯ, ಉದ್ಯೋಗದ ಕೊರತೆ ಯನ್ನು ಗುರಾ ಣಿಯನ್ನಾಗಿಸಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. 2017ಕ್ಕಿಂತ ಮೊದಲು ಜಿಲ್ಲೆಯಲ್ಲಿ ಅಭಿವೃದ್ಧಿ ಎಂಬ ವಿಚಾರ ನಿಧಾನಗತಿಯಲ್ಲಿ ಅಥವಾ ಅದು ಕನಸಿನಂತೆಯೇ ಇತ್ತು. ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನ್ಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾಮಗಾರಿಗಳಿಗೆ ಕೂಡ ಚಾಲನೆ ಸಿಕ್ಕಿದೆ ಎನ್ನುವುದು ಮೂಲಸೌಕರ್ಯ ಮತ್ತು ಕೈಗಾರಿಕೆ ಅಭಿವೃದ್ಧಿ ಸಚಿವ ಸತೀಶ್‌ ಮಹಾನಾ ಅವರ ಹೇಳಿಕೆ. ಮಹಾನಾ ಅವರು, 1991ರ ವಿಧಾನಸಭೆ ಚುನಾವಣೆಯಿಂದ ಸತತವಾಗಿ ಜಯ ಸಾಧಿಸುತ್ತಾ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿಯ ಮಟ್ಟಿಗೆ ಅವರು ಹಿರಿಯ ಮುಖಂಡರೂ ಹೌದು.

ಕಾನ್ಪುರದಲ್ಲಿ ಉದ್ಯೋಗ ನಷ್ಟವಾಗಿದೆ ಎಂದು ಹೇಳಿದವರು ಯಾರು ಎಂದು ಪ್ರತಿಸ್ಪರ್ಧಿಗಳಿಗೆ ಅವರ ತಿರುಗೇಟು. ಕಾನ್ಪುರದಲ್ಲಿ ಕೈಗಾರಿಕೆಗಳೂ ಸ್ಥಾಪನೆಯಾಗುತ್ತಿವೆ ಮತ್ತು ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ ಎಂದು ಹೇಳುತ್ತಾರೆ ಸತೀಶ್‌ ಮಹಾನಾ. ಸಮಾಜವಾದಿ ಪಕ್ಷದ ಸರಕಾರ ಅಧಿಕಾರದಲ್ಲಿ ಇದ್ದಾಗ ಸುಸೂತ್ರವಾಗಿ ಉದ್ಯಮ, ವ್ಯವಹಾರ ನಡೆಸುವ ಸೂಚ್ಯಂಕ (ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌ ರ್‍ಯಾಂಕಿಂಗ್‌) ನಲ್ಲಿ ಉತ್ತರ ಪ್ರದೇಶ 16ನೇ ಸ್ಥಾನದಲ್ಲಿತ್ತು. ಈಗ ಅದು ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಯಾರ ಸಾಧನೆ ಅತ್ಯುತ್ತಮ ಎಂದು ಪ್ರಶ್ನಿಸಲು ಮಹಾನಾ ಮರೆಯುವುದಿಲ್ಲ.  ಜನರನ್ನೇ ನೇರವಾಗಿ ಪ್ರಶ್ನಿಸಿದಾಗ ಅವರು ಹೇಳುವುದೇನೆಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಗೆ ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲವೆನ್ನುತ್ತಾರೆ. ಉದ್ಯೋಗ ಕೇಳಿ ಹೋದ ತಮಗೆ ಪೊಲೀಸರಿಂದ ಏಟು ಸಿಕ್ಕಿದೆ ಎಂದೂ ಅವರು ದೂರುತ್ತಾರೆ. ಉದ್ಯೋಗಕ್ಕೆ ನೇಮಕ ಮಾಡಿಕೊಂಡರೂ ಅದಕ್ಕೆ ಸಂಬಂಧಿಸಿದ ಪ್ರಕ್ರಿ ಯೆಗಳೇ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದು ಯುವಕರ ದೂರು.

ಬಹಳ ವರ್ಷಗಳ ಹಿಂದೆ ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅತ್ಯಂತ ಪ್ರವರ್ಧಮಾನದಲ್ಲಿ ಇದ್ದ ಜಿಲ್ಲೆ. ಸಮಾಜವಾದಿ ಪಕ್ಷ ರೂಪುಗೊಂಡ ಬಳಿಕ ಅದು ರಾರಾಜಿಸಿತು. ಈಗ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ನೇರ ಸ್ಪರ್ಧೆ ಇದೆ. ನೋಟು ಅಮಾನ್ಯದಿಂದಾಗಿ ಜಿಲ್ಲೆಯಲ್ಲಿನ ನಾಗರಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಆದರೆ ಬಿಜೆಪಿ ನಾಯಕರು ಜನರನ್ನು ಏನೇನೋ ವಾಗ್ಧಾನ ಮಾಡಿ ಮೋಸ ಮಾಡಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ ಸಮಾಜವಾದಿ ಪಕ್ಷದ ನಾಯಕ ಮತ್ತು ಸಿಶಮೌ ಕ್ಷೇತ್ರದ ಅಭ್ಯರ್ಥಿ ಇರ್ಫಾನ್‌ ಸೋಲಂಕಿ. ಉದ್ಯೋಗ ನಷ್ಟ, ಬೆಲೆ ಏರಿಕೆಯಲ್ಲದೆ 2020ರಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ರೌಡಿ ವಿಕಾಸ್‌ ದುಬೆಯನ್ನು ಎನ್‌ಕೌಂಟರ್‌ ಮೂಲಕ ಸಾಯಿಸಿದ ವಿಚಾರವೂ ಹಲವೆಡೆ ಚರ್ಚೆಗೆ ಬರುತ್ತಿದೆ. ಕಲ್ಯಾಣ್‌ಪುರ ಕ್ಷೇತ್ರದಿಂದ ದುಬೆಯ ಸಂಬಂಧಿಕರೊಬ್ಬರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟದ್ದು ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next