ಲಕ್ನೋ: ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಕಾರಣ ಜೋಡಿಯೊಂದು ಮದುವೆ ಆಚರಣೆಯನ್ನು ನೆರವೇರಿಸಿ ನೇಣಿಗೆ ಕೊರಳೊಡ್ಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಾನುವಾರ (ಡಿಸೆಂಬರ್ 24) ರಾತ್ರಿ ಈ ಘಟನೆ ನಡೆದಿದ್ದು,ಉತ್ತರ ಪ್ರದೇಶದ ಬುಧಾನಗರದ ರಾಖಿ ಚೌಹಾಣ್ (21) ಮತ್ತು ಉತ್ತರಾಖಂಡದ ಹರಿದ್ವಾರದ ಮನೀಶ್ ಚೌಹಾಣ್ (24) ಅವರ ಮೃತದೇಹಗಳು ಬಹ್ಸುಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಘಟನೆ ವಿವರ: ಮನೀಶ್ ಹಾಗೂ ರಾಖಿ ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ ಅವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ಕಾರಣದಿಂದ ಭಾನುವಾರ ರಾತ್ರಿ ಇಬ್ಬರು ಭೇಟಿ ಆಗಿದ್ದಾರೆ. ಈ ವೇಳೆ ರಾಖಿಯ ಹಣೆಗೆ ಮನೀಶ್ ಸಿಂಧೂರವಿಟ್ಟು, ಮದುವೆ ಆಯಿತೆಂದು ಆಕೆಗೆ ಸಿಹಿ ತಿನ್ನಿಸಿದ್ದಾನೆ. ಆ ಬಳಿಕ ಇಬ್ಬರು ಅಲ್ಲೇ ಇದ್ದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಒಂದೇ ಹಗ್ಗದಿಂದ ಎರಡು ಕುಣಿಕೆಗಳನ್ನು ಮಾಡಿದ್ದು, ಪರಸ್ಪರರ ಕೈಗಳನ್ನು ಹಿಡಿದುಕೊಂಡು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಂಧೂರ ಮತ್ತು ಸ್ವೀಟ್ ಬಾಕ್ಸ್ ಗಳು ಪತ್ತೆಯಾಗಿವೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಂತೋಷ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯು ನೇಣು ಬಿಗಿದುಕೊಂಡು ಉಸಿರುಗಟ್ಟಿದ ಸಾವನ್ನು ದೃಢಪಡಿಸಿದೆ. ಇಬ್ಬರೂ ಬಹುತೇಕ ಏಕಕಾಲದಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಸೋಮವಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.