ಮೀರತ್ : ಐವರು ರೈತರು ಪೊಲೀಸ್ ಗುಂಡಿಗೆ ಬಲಿಯಾದ ಮಂದ್‌ಸೋರಗೆ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಶಂಸಿಸುವ ಭರದಲ್ಲಿ ಸಾಮಾಜಿಕ ಜಾಲ ತಾಣ ಸಂದೇಶದಲ್ಲಿ ರಾಹುಲ್ ಅವರನ್ನು ‘ಪಪ್ಪು’ ಎಂದ ಕರೆದ ಹಿರಿಯ ಕಾಂಗ್ರೆಸ್ ನಾಯಕನನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಕಿತ್ತು ಹಾಕಲಾಗಿದೆ
ಮೀರತ್ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥರಾಗಿರುವ ವಿನಯ್ ಪ್ರಧಾನ್ ಅವರು “ಇಂಡಿಯನ್ ನ್ಯಾಶನಲ್ ಕಾಂಗ್ರೆಸ್’ ವಾಟ್ಸಾಪ್ ಗ್ರೂಪ್‌ನಲ್ಲಿ ಹರಿಯಬಿಟ್ಟ ಸಂದೇಶದಲ್ಲಿ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದಿದ್ದರು.
“ಪಪ್ಪು (ರಾಹುಲ್ ಗಾಂಧಿ) ಅದಾನಿ, ಅಂಬಾನಿ, ಮಲ್ಯ ಜತೆಗೆ ಕೈಜೋಡಿಸಬಹುದಿತ್ತು; ಆದರೆ ಆತ ಹಾಗೆ ಮಾಡಿಲ್ಲ; ಪಪ್ಪು ಒಬ್ಬ ಸಚಿವ ಅಥವಾ ಪ್ರಧಾನಿ ಆಗಬಹುದಿತ್ತು; ಆದರೆ ಹಾಗೆ ಮಾಡಲಿಲ್ಲ; ಆದರೆ ಆತ ಮಂದ್‌ಸೋರ್‌ಗೆ ಹೋಗುವುದನ್ನು ಆಯ್ಕೆ ಮಾಡಿದರು’ ಎಂದು ಪ್ರಧಾನ್ ತಮ್ಮ ಸಂದೇಶದಲ್ಲಿ ಹೇಳಿದ್ದರು.
“ಪ್ರಧಾನ್ ಅವರ ಈ ವಾಟ್ಸಾಪ್ ಸಂದೇಶ ಪ್ರಚೋದನಕಾರಿ ಆಗಿರುವ ಕಾರಣ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಗಿದೆ’ ಎಂದು ಕಾಂಗ್ರೆಸ್‌ನಲ್ಲಿನ ಶಿಸ್ತ ಸಮಿತಿಯ ಅಧ್ಯಕ್ಷರಾಗಿರುವ ರಾಮಕೃಷ್ಣ ದ್ವಿವೇದಿ ಹೇಳಿದ್ದಾರೆ.
ಆದರೆ ಪ್ರಧಾನ್ ಅವರು “ಈ ವಾಟ್ಸಾಪ್‌ನಲ್ಲಿ ಪೋಸ್ಟ್ ಮಾಡಿದ್ದು ನಾನು ಅಲ್ಲವೇ ಅಲ್ಲ; ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮುನ್ನ ಸ್ಪಷ್ಟನೆ ನೀಡುವ ಅವಕಾಶವನ್ನೇ ನನಗೆ ನೀಡಲಾಗಿಲ್ಲ’ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.