ಲಕ್ನೋ: ಸರ್ಕಸ್ ಕಲಾವಿದನೊಬ್ಬನನ್ನು ಹತ್ಯೆಗೈದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರನ್ನು ಇಮ್ರಾನ್, ಫರ್ಮಾನ್ ಮತ್ತು ಇರ್ಫಾನ್ ಎಂದು ಗುರುತಿಸಲಾಗಿದೆ.
ಸಹರಾನ್‌ಪುರದಿಂದ ಅಜಬ್ ಸಿಂಗ್ ಸೇರಿದಂತೆ ಇಮ್ರಾನ್, ಫರ್ಮಾನ್ ಮತ್ತು ಇರ್ಫಾನ್ ಭಿತ್ರಿ ದೀಹ್ ಗ್ರಾಮದಲ್ಲಿ ಸರ್ಕಸ್ ಮಾಡಲು ಬಂದಿದ್ದರು. ಈ ವೇಳೆ ಅವರ ತಂಡ ಆರತಿ ಎಂಬ ಮಹಿಳೆಯೊಂದಿಗೆ ವಾಸವಾಗಿದ್ದರು. ಜೂ. 11 ರಂದು ಅಜಬ್ ಸಿಂಗ್ ನನ್ನು ಹತ್ಯೆಗೈದು ಶಾಲೆಯೊಂದರಲ್ಲಿ ಸುಟ್ಟು ಹಾಕಲಾಗಿತ್ತು.
ಈ ಬಗ್ಗೆ ಮಾಹಿತಿಯನ್ನು ಪಡೆದ ಪೊಲೀಸರಿಗೆ ಮಹತ್ವದ ಸುಳಿವೇನು ಸಿಕ್ಕಿರಲಿಲ್ಲ. ಇದೇ ವೇಳೆ ಅವರ ಜೊತೆಗಿದ್ದ ಮೂವರು ಪರಾರಿಯಾಗಿದ್ದರು. ತನಿಖೆ ಜಾಡನ್ನು ಹಿಂಬಾಲಿಸಿದ ಪೊಲೀಸರಿಗೆ ಕ್ರೈಮ್ ಸ್ಪಾಟ್ ನಲ್ಲಿ ಕೆಲ ಕಾಂಡೋಮ್ ಪ್ಯಾಕೆಟ್ ಗಳು ಸಿಕ್ಕಿವೆ. ಈ ಕಾಂಡೋಮ್ ಪ್ಯಾಕೆಟ್ ಗಳೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ. ಒಂದು ಪೊಲೀಸರ ತಂಡ ಸಹರಾನ್‌ಪುರಕ್ಕೆ ತೆರಳಿ ಮೂವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆರೋಪಿಗಳನ್ನು ಬಂಧಿಸಿದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಜಬ್ ಸಿಂಗ್ ಜಾದೂಗಾರ ಆಗಿದ್ದರು. ಆತ ಆರೋಪಿಗಳಾದ ಇಮ್ರಾನ್ ಮತ್ತು ಇರ್ಫಾನ್ ಅವರ ಸಹೋದರಿಯೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದ. ಇದು ಆರೋಪಿಗಳಿಗೆ ಕೆರಳಿಸಿತ್ತು. ಹತ್ಯೆಯಾದ ದಿನ ಆರೋಪಿಗಳು ಅಜಬ್ ಸಿಂಗ್‌ಗೆ ವಿಪರೀತ ಮದ್ಯವನ್ನು ಕುಡಿಸಿ ಹತ್ಯೆ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ಹತ್ಯೆ ಮಾಡಲು ಇರ್ಫಾನ್ ವಿರೋಧಿಸಿದ್ದಾನೆ. ಆದರೆ ಇಮ್ರಾನ್ ಸಿಟ್ಟನ್ನು ಸಹಿಸದೇ ಫರ್ಮಾನ್ ನನ್ನು ಜೊತೆಗೂಡಿಸಿ ಮೂವರು ಕೊನೆಗೆ ಹತ್ಯೆ ಮಾಡಿ ದೇಹವನ್ನು ಶಾಲೆಯ ಪೀಠೋಪಕರಣ ಬಳಸಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.