ಲಕ್ನೋ: ಉತ್ತರಪ್ರದೇಶದ ಅಭಿವೃದ್ಧಿಗೆ ಸಮಾಜವಾದಿ ಪಕ್ಷ ಮತ್ತು ಬಹುಜನ್ ಸಮಾಜ್ ಪಕ್ಷ ರಾಹು-ಕೇತುಗಳಾಗಿದ್ದವು ಎಂದು ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತದಾರರು ಈ ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಬೇಕೆಮದು ಅಜಂಗಢ್ ಮತದಾರರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೇರಳ ಪೊಲೀಸ್ ಅಧಿಕಾರಿಗೆ ನೆಟ್ಟಿಗರು ಫಿದಾ-ವಿಡಿಯೋ ವೈರಲ್
ಸಮಾಜವಾದಿ, ಬಿಎಸ್ಪಿಗೆ ಜನರು ಮತ ಹಾಕಬಾರದು, ಯಾಕೆಂದರೆ ಈ(ಅಜಂಗಢ್) ಲೋಕಸಭಾ ಕ್ಷೇತ್ರವನ್ನು ಭಯೋತ್ಪಾದಕರ ತಾಣವಾಗಬಾರದು ಎಂದು ಯೋಗಿ ಆದಿತ್ಯನಾಥ್ ಹೇಳಿದರು. ಅವರು ಅಜಂಗಢ್ ನ ಚಾಕ್ರಾಪಾನ್ಪುರ್ ನಲ್ಲಿ ಉಪ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಗೆ ಮತ ನೀಡುವಂತೆ ಯೋಗಿ ಮತದಾರರಲ್ಲಿ ಮನವಿ ಮಾಡಿದರು. ಎಸ್ಪಿ ಮತ್ತು ಬಿಎಸ್ಪಿ ರಾಜ್ಯದ ಅಭಿವೃದ್ಧಿಗೆ ದುಷ್ಟ ಗ್ರಹಗಳಾಗಿವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಚಲಾಯಿಸಿ ಎಂದರು.
ಅಜಂಗಢ್ ಮತ್ತು ರಾಂಪುರ್ ಕ್ಷೇತಕ್ಕೆ ಜೂನ್ 23ರಂದು ಉಪ ಚುನಾವಣೆ ನಡೆಯಲಿದೆ. ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ 2022ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಜಂಗಢ್ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಗ್ನಿಪಥ್ ಯೋಜನೆಯನ್ನು ಇಡೀ ವಿಶ್ವವೇ ಸ್ವಾಗತಿಸಿದೆ, ಆದರೆ ವಿರೋಧಪಕ್ಷಗಳು ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.