Advertisement

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

05:37 PM Sep 24, 2024 | Team Udayavani |

ನವದೆಹಲಿ: ಏಳು ವರ್ಷದ ಬಾಲಕನನ್ನು ಅಪಹರಿಸಿದ್ದ ಆರೋಪಿಗಳಿಗೆ ಆಗ್ರಾ (Agra Court) ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಅಂದ ಹಾಗೆ ಈ ಪ್ರಕರಣದಲ್ಲೊಂದು ವಿಶೇಷತೆ ಇದೆ. ಅದೇನೆಂದರೆ ಯಾವ ಬಾಲಕ ಅಂದು ಅಪಹರಣಕ್ಕೊಳಗಾಗಿದ್ದಾನೋ ಅದೇ ಬಾಲಕ ಇಂದು ವಕೀಲರಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ವಾದಮಂಡಿಸಿರುವುದು!

Advertisement

ಏನಿದು ಪ್ರಕರಣ?

ಆಗ್ರಾದ ಖೇರ್‌ ಗಢ್‌ ನಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿದ್ದ ಈ ಪ್ರಕರಣ ನಡೆದು 17 ವರ್ಷಗಳೇ ಕಳೆದಿದೆ. ಪ್ರಕರಣದ ವಿಚಾರಣೆ ನಡೆಸಿದ ಅಡಿಷನಲ್‌ ಜಿಲ್ಲಾ ನ್ಯಾಯಾಧೀಶರಾದ ನೀರಜ್‌ ಕುಮಾರ್‌ ಬಕ್ಷಿ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದರು.

ಅಂದು ಅಪಹರಿಸಲ್ಪಟ್ಟ ಹರ್ಷ ಗರ್ಗ್‌ (Harsh Garg) ಎಂಬ ಬಾಲಕ ಈ 17 ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದ್ದು…ಈಗ ಆತ 24ರ ಹರೆಯದ ಯುವ ವಕೀಲರಾಗಿದ್ದಾರೆ. ತನ್ನ ಅಪಹರಣಕಾರ ಆರೋಪಿಗಳಿಗೆ ಬಗ್ಗೆ ಕೋರ್ಟ್‌ ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ಶಿಕ್ಷೆ ವಿಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2007ರ ಫೆಬ್ರವರಿ 10ರಂದು ಮನೆಯ ಹೊರಗೆ ಆಟವಾಡುತ್ತಿದ್ದ ಗರ್ಗ್‌ ನನ್ನು ತಂಡವೊಂದು ಅಪಹರಿಸಿತ್ತು. ಈ ಸಂದರ್ಭದಲ್ಲಿ ಅಪಹರಣ ತಡೆಯಲು ಯತ್ನಿಸಿದ್ದ ಗರ್ಗ್‌ ತಂದೆ ರವಿ ಕುಮಾರ್‌ ಗರ್ಗ್‌ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ನಂತರ ಹರ್ಷ ಗರ್ಗ್‌ ಬಿಡುಗಡೆಗೆ 55 ಲಕ್ಷ ರೂಪಾಯಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಸುಮಾರು 26 ದಿನಗಳ ನಂತರ ಮಧ್ಯಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗರ್ಗ್‌ ನನ್ನು ರಕ್ಷಿಸಿದ್ದರು.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುಡ್ಡಾನ್‌ ಕಾಛಿ, ರಾಜೇಶ್‌ ಶರ್ಮಾ, ರಾಜ್‌ ಕುಮಾರ್‌, ಫತೇಹ್‌ ಸಿಂಗ್‌ ಅಲಿಯಾಸ್‌ ಛಿಗಾ, ಅಮರ್‌ ಸಿಂಗ್‌, ಬಲ್ವೀರ್‌, ರಾಮ್‌ ಪ್ರಕಾಶ್‌, ಭೀಮ್‌ ಅಲಿಯಾಸ್‌ ಭಿಖಾರಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದರು. 17 ವರ್ಷಗಳ ಬಳಿಕ ಕೋರ್ಟ್‌ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ನಾಲ್ವರು ಆರೋಪಿಗಳು ಖುಲಾಸೆಗೊಂಡಿದ್ದರು.

ಈ ಪ್ರಕರಣದಲ್ಲಿ ಗರ್ಗ್‌ ಸಾಕ್ಷ್ಯ ಪ್ರಮುಖ ಪಾತ್ರ ವಹಿಸಿತ್ತು. 2022ರಲ್ಲಿ ಹರ್ಷ ಗರ್ಗ್‌ ಕಾನೂನು ಪದವಿ ಪಡೆದಿದ್ದು, ಬಳಿಕ ಗರ್ಗ್‌ ಈ ಪ್ರಕರಣದ ವಾದ, ಪ್ರತಿವಾದ ಪ್ರಕ್ರಿಯೆಯಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. 2024ರ ಸೆಪ್ಟೆಂಬರ್‌ 17ರಂದು ಕೋರ್ಟ್‌ ನಲ್ಲಿ ತನ್ನ ಅಪಹರಣ ಪ್ರಕರಣದ ಬಗ್ಗೆ ಅಂತಿಮ ವಾದ ಸಮರ್ಥವಾಗಿ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next