Advertisement

ಯುಪಿ ಬಿಜೆಪಿ ಸರ್ಕಾರ ವಜಾಕ್ಕೆ ಆಗ್ರಹ

03:15 PM Aug 15, 2017 | |

ಶಿವಮೊಗ್ಗ: ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶು ಹಾಗೂ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ
ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

Advertisement

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ತವರು ಕ್ಷೇತ್ರ ಗೋರಖ್‌ಪುರದ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ 60ಕ್ಕೂ ಹೆಚ್ಚು ಮಕ್ಕಳು ಮರಣ ಹೊಂದಿದ್ದಾರೆ. ಪ್ರಕರಣದಲ್ಲಿ ನಿರ್ಲಕ್ಷ ತೋರಿರುವ ಯೋಗಿ ಆದಿತ್ಯನಾಥ್‌ ಅವರನ್ನು ಕೂಡಲೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದರ ಜೊತೆಗೆ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಇಡೀ ದೇಶದಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಎಲ್ಲ ಸರ್ಕಾರಗಳೂ ಜಾರಿಗೆ ತಂದಿವೆ. ಮಕ್ಕಳ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿವೆ.  ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೊಳ್ಳು ಭರವಸೆಗಳ ನೆರಳಲ್ಲೇ ಅಧಿಕಾರದ ಗದ್ದುಗೆಗೇರಿದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಕ್ಕಿಂತ ಹೆಚ್ಚು ಕೋಮು ಪ್ರಚೋದನೆಯ ಕೃತ್ಯಗಳನ್ನು ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ನವಜಾತ ಶಿಶುಗಳು ಹಾಗೂ ಮಕ್ಕಳು ಸಾಲು ಸಾಲಾಗಿ ಮರಣ ಹೊಂದಿದ್ದು, ಅದಕ್ಕೆ ನೇರ ಹೊಣೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೊರಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್‌ ಪೂರೈಕೆ ಮಾಡುವ ಏಜೆನ್ಸಿಗಳಿಗೆ ಸಮರ್ಪಕವಾಗಿ ಬಿಲ್‌ ಪಾವತಿಸದಿರುವುದರಿಂದ ಏಜೆನ್ಸಿಯವರು ಆಮ್ಲಜನಕ ಸಿಲಿಂಡರ್‌ ಪೂರೈಸದೇ ಇಂತಹ ಘೋರ ದುರಂತ ನಡೆದಿದೆ. ಏನೇ ಆದರೂ ಈ ಕೃತ್ಯ ಅತ್ಯಂತ 
ಅಮಾನವೀಯವಾಗಿದ್ದು, ಇಡೀ ದೇಶ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಪ್ರಕರಣ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು. ಯೋಗಿ ಆದಿತ್ಯನಾಥ್‌ ಅವರ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸಬೇಕು. ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ, ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಾಲಾಜಿ, ಎಚ್‌.ಎಸ್‌. ವಿಜಯ್‌ಕುಮಾರ್‌, ಪ್ರಮೋದ್‌, ಕೆ. ಚೇತನ್‌, ರಮೇಶ್‌ ಹೆಗ್ಡೆ, ವಿಕಾಸ್‌ ನಾಡಿಗ್‌,ಧನಂಜಯ್‌ ಶ್ರವಣ್‌, ಮೊಹಮ್ಮದ್‌ ಆರೀಫ್‌ ವುಲ್ಲಾ, ಮುಖೇಶ್‌, ಚೇತನ್‌, ವಿನಯ್‌ ತಾಂಡ್ಲೆ, ಪುರಲೆ ಮಂಜು, ಚಂದು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next