ದಾವಣಗೆರೆ: ಬಿಜೆಪಿಯವರ ಆಡಿಯೋ, ವಿಡಿಯೋ ಎರಡನ್ನು ನೋಡಿದ್ದೇವೆ. ಆದರೂ ಇಡೀ ದೇಶದಲ್ಲಿ ಇವರಂತಹ ಸತ್ಯವಂತರು ಯಾರು ಇಲ್ಲ ಎನ್ನುವಂತೆ ಓಡಾಡುತ್ತಿದ್ದಾರೆ. ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ. ಜಾತಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜಕೀಯ ಪರಿಸ್ಥಿತಿ ಮುಂದೇನು ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಖಂಡಿತವಾಗಿ ಈಗಿರುವ ಸರ್ಕಾರ ಬಿದ್ದೋಗುತ್ತೆ. ಬಿಜೆಪಿಯವರು ಅಪರೇಷನ್-2 ಮಾಡಲು ಓಡಾಡುತ್ತಿದ್ದಾರೆ. ಶ್ರೀನಿವಾಸ್ ಗೌಡರವರ ಮನೆಗೆ ಹೋಗಿ ಆಮಿಷ ತೋರಿಸಿದ್ದಾರೆ ವಾಮ ಮಾರ್ಗದಿಂದಾದರೂ ಅಧಿಕಾರ ಹಿಡಿಯಬೇಕು ಎನ್ನುವುದು ಅವರ ಆಶಯ.
ಜನರು ಸ್ವಚ್ಚ ರಾಜಕಾರಣಕ್ಕೆ ಆಸೆ ಪಡುತ್ತಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ ಏಕಾಂಗಿ ಎಂದು ಹೇಳಿದರು. ನನ್ನನ್ನು ಬಫೂನ್ ಎಂದರು. ಅವರಿಗೆ ಇಷ್ಟ ಬಂದಂತೆ ಮಾತನಾಡುತ್ತಿದ್ದಾರೆ. ಅದರ ಕುರಿತು ನಾವು ಮಾತನಾಡಿದರೆ ಚರ್ಚೆ ತಾರಕಕ್ಕೆ ಏರುತ್ತದೆ ಎಂದರು.
ದ್ರೋಹಿಗಳು, ಬೆನ್ನಿಗೆ ಚೂರಿ ಹಾಕುವಂತವರ ಋಣದಲ್ಲಿ ಇದೀವಿ ಎಂದು ಸಿಎಂ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ರಾಜ್ಯದ ಜನರ ಋಣದಲ್ಲಿ ಇರಬೇಕು. ಅದನ್ನು ಬಿಟ್ಟು ಅನರ್ಹ ಶಾಸಕರ ಋಣದಲ್ಲಿ ಇದ್ದೇವೆ ಎಂದು ಹೇಳುತ್ತಾರೆ. ಇದುವರೆಗೂ ಸಹ ಬಿಜೆಪಿಗೆ ಬಹುಮತ ಇಲ್ಲ. ಜನರು ಬಿಜೆಪಿ ಹಾಗೂ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸುತ್ತಾರೆ. ಅವರೆಲ್ಲ ಅಡ್ವಾನ್ಸ್ ಶಾಸಕರು, ಅಡ್ವಾನ್ಸ್ ತೆಗೆದುಕೊಂಡು ಪಕ್ಷ ಬಿಟ್ಟಿದ್ದು ಎಂದು ವ್ಯಂಗ್ಯವಾಡಿದರು.
ಸಿಎಂ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಅನರ್ಹ ಶಾಸಕರನ್ನು ಮಂತ್ರಿ, ಡಿಸಿಎಂ ಮಾಡ್ತಿವಿ ಎಂದು ಜಾತಿ ಹೆಸರಲ್ಲಿ ಮತಗಳನ್ನು ಕೇಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಹೇಳುವಂತಿಲ್ಲ. ಅದರ ಕುರಿತು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.
ಪ್ರಧಾನಿ ಮೋದಿಯವರಿಗೆ ದೇಶ ನಡೆಸಲು ಬರೋದಿಲ್ಲ. ಜಿಡಿಪಿ ಕುಸಿದು, ರುಪಾಯಿ ಮೌಲ್ಯ ಕುಸಿದಿದೆ. ಮೂರ್ಖತನದ ಆರ್ಥಿಕ ನೀತಿಯಿಂದ ಜಿಡಿಪಿ ಕುಸಿದಿದೆ. ನಾವು ಜೆಡಿಎಸ್ ಅನ್ನು ಕೂಡ ನಂಬುವುದಿಲ್ಲ. ಮೊದಲು ಒಂದು ರೀತಿಯಾಗಿ ಮಾತನಾಡಿದರು.ತದನಂತರ ಬೇರೆ ರೀತಿ ಮಾತನಾಡಿದರು. ನಮ್ಮವರೇ ನಮ್ಮನ್ನು ಮೋಸಗೊಳಿಸಿದರು. ನಾವು ಯಾರನ್ನು, ಯಾವ ರೀತಿಯಾಗಿ ನಂಬಬೇಕು ಎಂದು ಪ್ರಶ್ನಿಸಿದರು.