Advertisement

ವ್ಯವಸ್ಥೆಯ ಹುಳುಕುಗಳ ಅನಾವರಣ

10:08 AM Jan 19, 2020 | Lakshmi GovindaRaj |

“ದುಡ್ಡಿದ್ರೆ ದುನಿಯಾ ಬಾಸ್‌. ಇಲ್ಲ ಅಂದರೆ, ಕಟ್ಕೊಂಡಿರೋ ಹೆಂಡ್ತೀನೂ ಜೊತೆಲಿರೋಲ್ಲ…’ ಆ ಅಸಹಾಯಕ ನಿರ್ದೇಶಕ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು “ಬಂಗಾರ’ದ ಕಥೆ ಶುರುವಾಗಿ, ಸಾಕಷ್ಟು ಏರಿಳಿತಗಳಾಗಿರುತ್ತೆ. ಆ ಬಂಗಾರದ ಕಥೆಯ ಹಿಂದಿರುವ ರೋಚಕತೆಯೇ ಚಿತ್ರದ ಹೈಲೈಟ್‌. “ಜನ್‌ಧನ್‌’ ಕಪ್ಪು ಹಣ ಕುರಿತಾದ ಚಿತ್ರ. ಡಿಮಾನಿಟೇಜೇಶನ್‌ ನಂತರ ಆದಂತಹ ಸಮಸ್ಯೆಗಳು, ನಷ್ಟಗಳು, ಕಷ್ಟಗಳ ಕುರಿತು ಇಲ್ಲಿ ಹೇಳಲಾಗಿದೆ.

Advertisement

ನಿರ್ದೇಶಕರಿಗೆ ಇಲ್ಲಿ ಏನು ಹೇಳಬೇಕು, ಎಷ್ಟು ತೋರಿಸಬೇಕು ಎಂಬುದರ ಸ್ಪಷ್ಟತೆ ಇದೆ. ಹಾಗಾಗಿ, ಎಲ್ಲೂ ಗೊಂದಲ ಇಲ್ಲದೆ, ನೋಡುಗರಲ್ಲೂ ಆಗಾಗ ಕುತೂಹಲದೊಂದಿಗೆ ಸಾಗುವ ಚಿತ್ರದಲ್ಲಿ ಒಂದು ಆಶಯವಿದೆ. ಅದೇನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇದು ಬೆಂಗಳೂರು ಮತ್ತು ಶಿರಾವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯೋ ಕಥೆ. ಇಡೀ ಚಿತ್ರ ಜರ್ನಿಯಲ್ಲೇ ಸಾಗುವುದರಿಂದ ಆ ಕಾರು ಎಷ್ಟು ವೇಗವಾಗಿ ಸಾಗುತ್ತೋ, ಅಷ್ಟೇ ವೇಗವಾಗಿ ಚಿತ್ರವೂ ಸಾಗುತ್ತೆ.

ಹಾಗಾಗಿ ಇಲ್ಲಿ ವಿನಾಕಾರಣ ದೃಶ್ಯಗಳಿಲ್ಲ, ಸುಖಾಸುಮ್ಮನೆ ಪಾತ್ರಗಳ ಎಂಟ್ರಿಯೂ ಇಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಹೊಂದಿರುವುದರಿಂದ, ಮೊದಲರ್ಧದಲ್ಲಿ ಕೊಂಚ ಗೊಂದಲ ಎನಿಸಿದರೂ, ದ್ವಿತಿಯಾರ್ಧದಲ್ಲಿ ಆ ಎಲ್ಲಾ ಗೊಂದಲಕ್ಕೂ ಒಂದೊಂದೇ ಲಿಂಕ್‌ ಕೊಡುವ ಮೂಲಕ ನೋಡುಗರು ಅರ್ಥೈಸಿಕೊಳ್ಳವಂತೆ ಮಾಡಿದ್ದಾರೆ. ಸಣ್ಣಪುಟ್ಟ ಎಡವಟ್ಟುಗಳು ಇಲ್ಲಿ ಕಂಡು ಬಂದರೂ, ಆಗಾಗ ಕಾಣಸಿಗುವ ಸಣ್ಣಪುಟ್ಟ ತಿರುವುಗಳು ಅದನ್ನು ಮರೆಸುವಲ್ಲಿ ಯಶಸ್ವಿಯಾಗುತ್ತವೆ.

ಮೊದಲರ್ಧ ತುಂಬ ಸರಳವಾಗಿಯೇ ಸಾಗುವ ಚಿತ್ರದ ಕಥೆ, ದ್ವಿತಿಯಾರ್ಧದಲ್ಲಿ ಒಂದಷ್ಟು ಟ್ವಿಸ್ಟ್‌ಗಳ ಮೂಲಕ ನೋಡುಗರಲ್ಲಿ ಇನ್ನಷ್ಟು ಕುತೂಹಲ ಮೂಡಿಸುತ್ತದೆ. ಜರ್ನಿ ಚಿತ್ರೀಕರಣ ವೇಳೆ ಅಲ್ಲಲ್ಲಿ ಛಾಯಾಗ್ರಹಣದ ಕೆಲಸ ಹಿನ್ನೆಡೆ ಎನಿಸಿದರೂ, ಹಿನ್ನೆಲೆ ಸಂಗೀತ ಅದನ್ನು ಎತ್ತಿ ಹಿಡಿಯುವಂತಿದೆ. ಬಹುತೇಕ ಹೊಸ ಮುಖಗಳೇ ಇಲ್ಲಿ ಕಂಡರೂ, ಎಲ್ಲೂ ಗೊಂದಲವಿರದಂತೆ ಪಾತ್ರಗಳನ್ನು ಪೋಷಿಸಲಾಗಿದೆ.

ಕೇವಲ ಎರಡುಗಂಟೆ ಅವಧಿಯಲ್ಲೇ ಒಂದು ವ್ಯವಸ್ಥೆಯ ಹುಳುಕನ್ನೆಲ್ಲಾ ಹೊರಗೆಡುವ ಅಂಶ ಚಿತ್ರದ ಪ್ಲಸ್‌. ಆ ಬಗ್ಗೆ ನೋಡುವ ಕುತೂಹಲವಿದ್ದರೆ, “ಜನ್‌ಧನ್‌’ ನೋಡಲ್ಲಡ್ಡಿಯಿಲ್ಲ. ಒಬ್ಬ ಸ್ವಾಭಿಮಾನಿ ನಿರ್ದೇಶಕನಿಗೆ ಹೊಸ ದೊಂದು ಸಿನಿಮಾ ಮಾಡುವ ಆಸೆ. ಆದರೆ, ಕಾಸಿಲ್ಲ. ಯಾರೊಬ್ಬರೂ ಬೆಂಬಲಕ್ಕೂ ಬರಲ್ಲ. ಸಂಸಾರ ನಡೆಸಬೇಕು. ಹೆಂಡತಿಯ ಚುಚ್ಚು ಮಾತಿನ ಮಧ್ಯೆಯೂ ಹೇಗೋ ಸಿನಿಮಾ ಮಾಡಿ ಸಾಧಿಸಬೇಕೆಂಬ ಛಲದಲ್ಲಿರುವ ನಿರ್ದೇಶಕ ಒಂದು ದಾರಿ ಹಿಡಿಯುತ್ತಾನೆ.

Advertisement

ಆ ದಾರಿಗೆ ಚಿತ್ರರಂಗದಲ್ಲಿ ನಾಯಕ, ನಾಯಕಿ ಗಬೇಕು ಎಂದು ಕನಸು ಕಟ್ಟಿಕೊಂಡ ಇಬ್ಬರು ಜೊತೆಯಾಗುತ್ತಾರೆ. ಮತ್ತೂಬ್ಬ ಅವರನ್ನು ಅಡ್ಡದಾರಿಗೆ ಕರೆದೊಯ್ಯುತ್ತಾನೆ. ಆ ಕಾರು ಬೆನ್ನು ಹತ್ತುವ ಇಬ್ಬರು ಖದೀಮರು ಒಂದು ಕಡೆಯಾದರೆ, ನಿರ್ದೇಶಕನನ್ನು ಕೊಲ್ಲಲು ಸಂಚು ರೂಪಿಸುವ ವ್ಯಕ್ತಿ ಇನ್ನೊಂದು ಕಡೆ. ಇದರೊಂದಿಗೆ ಕಾರಲ್ಲಿ ಗೋಲ್ಡ್‌ ಬಿಸ್ಕೆಟ್‌ ಬ್ಯಾಗ್‌ ಸಾಗಿಸುವ ಹೊಣೆ ನಿರ್ದೇಶಕನದ್ದು. ಕೊನೆಗೆ ಅಲ್ಲಿ ಏನಾಗುತ್ತೆ, ಎಷ್ಟೆಲ್ಲಾ ತೊಂದರೆ ಆಗುತ್ತೆ ಅನ್ನೋದು ಸಸ್ಪೆನ್ಸ್‌.

ಸುನೀಲ್‌ ಶಶಿ ಪಾತ್ರಕ್ಕೆ ಏನು ಬೇಕೋ ಅದನ್ನು ಮಾಡಿದ್ದಾರೆ. ಫೈಟ್‌, ಡೈಲಾಗ್‌ ಡಿಲವರಿಯಲ್ಲಿ ಗಮನ ಸೆಳೆಯುತ್ತಾರೆ. ರಚನಾ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಅರುಣ್‌, ಸಾಯಿ ಲಕ್ಷ್ಮಣ್‌, ಟಾಪ್‌ಸ್ಟಾರ್‌ ರೇಣು, ಸುಮಂತ್‌ ಶರ್ಮ ಇತರೆ ಪಾತ್ರಗಳು ಇರುವಷ್ಟು ಸಮಯ ಇಷ್ಟವಾಗುತ್ತವೆ. ಟಾಪ್‌ ಸ್ಟಾರ್‌ ರೇಣು ಸಂಗೀತ ಒಂದು ಹಾಡು ಪರವಾಗಿಲ್ಲ. ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತ ಪೂರಕವಾಗಿದೆ. ಉಮೇಶ್‌ ಕಂಪ್ಲಾಪುರ್‌ ಛಾಯಾಗ್ರಹಣದಲ್ಲಿ ಜರ್ನಿಯ ಸೊಬಗಿದೆ.

ಚಿತ್ರ: ಜನ್‌ಧನ್‌
ನಿರ್ಮಾಣ: ಶ್ರೀ ಸಿದ್ಧಿವಿನಾಯಕ ಫಿಲಂಸ್‌
ನಿರ್ದೇಶನ: ಮರಡಿಹಳ್ಳಿ ಟಿ.ನಾಗಚಂದ್ರ
ತಾರಾಗಣ: ಸುನೀಲ್‌ ಶಶಿ, ರಚನಾ, ಅರುಣ್‌, ಸಾಯಿ ಲಕ್ಷ್ಮಣ್‌, ಟಾಪ್‌ಸ್ಟಾರ್‌ ರೇಣು, ಸುಮಂತ್‌ ಶರ್ಮ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next