ಸರ್ಪ ಸಂತತಿಯನ್ನು ಗರುಡನಿಂದ ಕಾಪಾಡಿದ ಜೀಮೂತ ವಾಹನನೇ ನಾಟಕದ ನಾಯಕ. ತನ್ನ ಶರೀರವನ್ನೇ ದಾನವಾಗಿತ್ತ ತ್ಯಾಗಿ, ಪರೋಪಕಾರ ಜೀವಿಯೊಂದರ ಬದುಕಿನ ಹಕ್ಕನ್ನು ಗೌರವಿಸುವುದು ನಾಟಕ ಅನಾವರಣಗೊಳಿಸುವ ಜೀವನ ಮೌಲ್ಯಗಳು.
ನಿಟ್ಟೂರು ಪ್ರೌಢಶಾಲೆ ವಾರ್ಷಿಕೋತ್ಸವ ಮತ್ತು ಸುವರ್ಣ ಪರ್ವ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಎರಡು ನಾಟಕಗಳು ಮೆಚ್ಚುಗೆಗಳಿಸಿದವು. ವಾರ್ಷಿಕೋತ್ಸವದಂದು ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ನಾಟಕ ಜೀಮೂತ ವಾಹನ. ಸಂಸ್ಕೃತ ಕವಿ ಶ್ರೀಹರ್ಷ ರಚಿಸಿದ ನಾಗಾನಂದ ಈ ನಾಟಕದ ಮೂಲ, ಹೊಸರೂಪದಲ್ಲಿ ಕನ್ನಡಕ್ಕೆ ತಂದವರು ಎಚ್.ಎಸ್. ವೆಂಕಟೇಶ್ ಮೂರ್ತಿ.
ಸರ್ಪ ಸಂತತಿಯನ್ನು ಗರುಡನಿಂದ ಕಾಪಾಡಿದ ಜೀಮೂತ ವಾಹನನೇ ನಾಟಕದ ನಾಯಕ. ತನ್ನ ಶರೀರವನ್ನೇ ದಾನವಾಗಿತ್ತ ತ್ಯಾಗಿ, ಪರೋಪಕಾರ ಜೀವಿಯೊಂದರ ಬದುಕಿನ ಹಕ್ಕನ್ನು ಗೌರವಿಸುವುದು ನಾಟಕ ಅನಾವರಣಗೊಳಿಸುವ ಜೀವನ ಮೌಲ್ಯಗಳು. ಪಟ್ಲ ಸಂತೋಷ ನಾಯಕ್‌ರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ವಿದ್ಯಾರ್ಥಿಗಳ ಮನೋಜ್ಞ ಅಭಿನಯ ಜೀವಂತಿಕೆ ತುಂಬುವಲ್ಲಿ ಸಫಲವಾಯಿತು. ಉತ್ತಮ ರಂಗಸಜ್ಜಿಕೆ, ಬೆಳಕಿನ ಸಂಯೋಜನೆ ನಾಟಕಕ್ಕೆ ವಿಶೇಷ ಮೆರಗು ತಂದವು.
ಸುವರ್ಣ ಪರ್ವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ನಾಟಕ ಚೋರ ಚರಣದಾಸ. ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ನಿರ್ದೇಶಿಸಿ ನಟಿಸಿದ ನಾಟಕ ಮೆಚ್ಚುಗೆಗೆ ಪಾತ್ರವಾಯಿತು. ಮೂಲದಲ್ಲಿ ರಾಜಸ್ಥಾನಿ ಜನಪದ ಕತೆಯನ್ನು ನಾಟಕವಾಗಿ ರೂಪಾಂತರಿಸಿದವರು ಹಬೀಬ್ ತನ್ವೀರ್. ಕನ್ನಡಕ್ಕೆ ಅನುವಾದಿಸಿ ರೂಪಾಂತರಿಸಿದವರು ಡಾ| ಸಿದ್ಧಲಿಂಗ ಪಟ್ಟಣ ಶೆಟ್ಟಿ. ಒಬ್ಬ ಪ್ರಾಮಾಣಿಕ ಕಳ್ಳ ತನ್ನ ಜೀವನವನ್ನು ತ್ಯಜಿಸಿ, ಜೀವನ ಮೌಲ್ಯಗಳನ್ನು ಅಮರಗೊಳಿಸುತ್ತಾನೆ. ಸಾಮಾನ್ಯ ವ್ಯಕ್ತಿಯಾಗಿದ್ದ ನಾಟಕದ ನಾಯಕ ಸತಕ್ಕಾಗಿ ಜೀವ ಬೀಡುವುದೇ ನಾಟಕದ ಕಥಾವಸ್ತು. ಹಿತಮಿತವಾದ ರಂಗೋಪಕರಣಗಳ ಬಳಕೆ, ಬೆಳಕಿನ ಸಂಯೋಜನೆ ರಂಗಗೀತೆಗಳ ಹಿನ್ನಲೆ ಹಳೆ ವಿದ್ಯಾರ್ಥಿ ತಂಡದ ಮನೋಜ್ಞ ಅಭಿನಯದ ಮೂಲಕ ನಾಟಕ ಚಿರಸ್ಥಾಯಿಯಾಗುವಲ್ಲಿ ಯಶಸ್ವಿಯಾಯಿತು. ಹಲವು ವರ್ಷಗಳಿಂದ ಶಾಲೆಯಲ್ಲಿ ಪ್ರಬುದ್ಧ ನಿರ್ದೇಶಕರಿಂದ ನಿರ್ದೇಶಿಸಲ್ಪಟ್ಟ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಇದರ ಪ್ರತಿಫಲವೆಂಬತೆ ಕೆಲವೇ ದಿನಗಳ ತರಬೇತಿಯಿಂದ ರೂಪುಗೊಂಡ ಚೋರ ಚರಣದಾಸ ನಾಟಕ ಮನತಟ್ಟಿತು. ಶಶಿಪ್ರಭಾ ಕಾರಂತ ಮತ್ತು ಡಾ| ಪ್ರತಿಮಾ ಜಯಪ್ರಕಾಶ್ ನಾಟಕವನ್ನು ಸಂಯೋಜಿಸಿದರು.
ದೇವದಾಸ್ ಶೆಟ್ಟಿ