Advertisement

ಉಪಯೋಗಕ್ಕಿಲ್ಲದ ನಕ್ರೆ ಆರೋಗ್ಯ ಉಪಕೇಂದ್ರ

10:27 AM Oct 12, 2019 | sudhir |

ಕಾರ್ಕಳ: ಕುಕ್ಕುಂದೂರು ಗ್ರಾಮದ ರೋಗಿಗಳಿಗೆ ಸ್ಪಂದಿಸ ಬೇಕಾದ ಆರೋಗ್ಯ ಉಪಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರಿಲ್ಲದೆ ಕಟ್ಟಡ ನಿರುಪಯುಕ್ತವಾಗಿದೆ.

Advertisement

13 ಸಾವಿರ ಜನಸಂಖ್ಯೆಯಿರುವ ಕುಕ್ಕುಂದೂರು ಗ್ರಾಮದಲ್ಲಿ 5 ಸಾವಿರ ಮಂದಿ ಇದರ ಪ್ರಯೋಜನ ಪಡೆಯಬೇಕಿತ್ತು. 2018ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅನುದಾನದಡಿ ಉಪಕೇಂದ್ರ ನಿರ್ಮಾಣವಾಗಿತ್ತು. ಆದರೆ ಇದೀಗ ಅಲ್ಲಿ ಆರೋಗ್ಯ ಸಹಾಯಕಿಯರಿಲ್ಲದೆ ಉಪಕೇಂದ್ರದ ಪ್ರಯೋಜನ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ.

30 ಲಕ್ಷ ರೂ. ವೆಚ್ಚ
ನಕ್ರೆ ಉಪಕೇಂದ್ರವನ್ನು 2018ರ ನ. 21ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಲೋಕಾರ್ಪಣೆ ಮಾಡಿದ್ದರು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿತ್ತು. ಆರಂಭದ ಮೂರು ತಿಂಗಳು ಆರೋಗ್ಯ ಸಹಾಯಕಿಯೋರ್ವರು ಕಾರ್ಯನಿರ್ವಹಿಸುತ್ತಿದ್ದರು. ಉತ್ತಮ ಆರೋಗ್ಯ ಸಹಾಯಕಿಯೆಂದು ಜನರಿಂದ ಪ್ರಶಂಸೆಗೊಳಪಟ್ಟ ಅವರು ಅನಾರೋಗ್ಯಕ್ಕೀಡಾಗಿ ರಜೆ ಪಡೆದರು. ರಜೆ ಪಡೆದು 6 ತಿಂಗಳಾಗುತ್ತ ಬಂದರೂ ಆರೋಗ್ಯ ಇಲಾಖೆ ಬದಲಿ ಸಿಬಂದಿಯನ್ನು ಅಲ್ಲಿಗೆ ನಿಯುಕ್ತಿ ಗೊಳಿಸಿಲ್ಲ,
ಕುಕ್ಕುಂದೂರು ಗ್ರಾಮದ ನಕ್ರೆ ಪ್ರದೇಶ ದಲ್ಲಿ ಅಂದರೆ ಉಪಕೇಂದ್ರದ 1 ಕಿ. ಮೀ. ದೂರದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗಾಗಿ ಗರ್ಭಿಣಿ,
ಬಾಣಂತಿಯರು ಪ್ರಾಥಮಿಕ ಚಿಕಿತ್ಸೆಗಾಗಿ ಅಲ್ಲಿಗೆ ತೆರಳುತ್ತಿದ್ದಾರೆ. ಪಕ್ಕದಲ್ಲಿ ಉಪಕೇಂದ್ರ ನಿರ್ಮಾಣ ಮಾಡುವ ಆವಶ್ಯಕತೆ ಏನಿತ್ತು ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಖಾಲಿ ಹುದ್ದೆಗಳು
ಕಾರ್ಕಳ ತಾಲೂಕಿನಲ್ಲಿ ಒಟ್ಟು 16 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 73 ಉಪಕೇಂದ್ರಗಳಿವೆ. 73 ಆರೋಗ್ಯ ಸಹಾಯಕಿಯರ ಹುದ್ದೆಗಳಲ್ಲಿ 54 ಮಂದಿ ಮಾತ್ರವಿದ್ದು 19 ಹುದ್ದೆಗಳು ಖಾಲಿಯಿವೆ. 36 ಆರೋಗ್ಯ ಸಹಾಯಕರ ಹುದ್ದೆಗಳಲ್ಲಿ ಕೇವಲ 5 ಮಂದಿಯಿದ್ದು, 31 ಹುದ್ದೆಗಳು ಖಾಲಿಯಿವೆ.

ಸದ್ಯವೇ ಸಿಬಂದಿ ನೇಮಕ
ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆಯಿದೆ ನಿಜ. ನಕ್ರೆ ಉಪಕೇಂದ್ರದ ಆರೋಗ್ಯ ಸಹಾಯಕಿ ಅನಾರೋಗ್ಯದಿಂದಾಗಿ ರಜೆಯಲ್ಲಿದ್ದಾರೆ. ಸದ್ಯವೇ ಅಲ್ಲಿಗೆ ಸಿಬಂದಿ ನಿಯುಕ್ತಿಗೊಳಿಸಲಾಗುವುದು.
-ಡಾ| ಕೃಷ್ಣಾನಂದ ಶೆಟ್ಟಿ, ತಾಲೂಕು ವೈದ್ಯಾಧಿಕಾರಿ

Advertisement

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next